ಹೊಸ ಯುಗಕ್ಕಾಗಿ ಹಳೆ ಕಥೆಗಳು – 1

Thumbnail

ಹೊಸ ಯುಗಕ್ಕಾಗಿ ಹಳೆ ಕಥೆಗಳು – 1

ಒಂದು ಜಿಂಕೆಯ ಕಥೆ

ದಟ್ಟ ಕಾಡಿನ ಮೂಲೆಯೊಂದರಲ್ಲಿ ಜಿಂಕೆಗಳ ಹಿಂಡೊಂದು ನೆಲೆಯಾಗಿತ್ತು. ಸಣ್ಣ-ದೊಡ್ಡ ಜಿಂಕೆಗಳ ನಡುವೆ ಸುಂದರವಾದ ಹರಿಣವೊಂದಿತ್ತು. ನಮ್ಮ ಅನುಕೂಲಕ್ಕಾಗಿ  ಅವಳನ್ನು ಸುಂದರಿ ಎಂದು ಕರೆಯೋಣ.  ಸುಂದರಿ ಎತ್ತರದ ಜಿಂಕೆ. ಆಕೆಯ ಕಣ್ಣುಗಳು ಪಳಪಳನೆ ಹೊಳೆಯುವ ಮುತ್ತಿನಂತೆ. ಮೈಚರ್ಮ ಮಿರಮಿರನೆ ಮಿಂಚುತ್ತಿತ್ತು. ಅವಳ ಜತೆಗಾರ ಜಿಂಕೆಗಳೆಲ್ಲ ಅವಳ ಸೊಬಗನ್ನು ಅತೀವವಾಗಿ ವರ್ಣಿಸುತ್ತಿದ್ದವು. ಆದರೆ ಒಂದೇ ಒಂದು ಲೋಪ ತನ್ನಲ್ಲಿ ಸುಂದರಿ ಕಂಡಿದ್ದಳು. ಅವಳ ಕಾಲುಗಳು ಅವಳಿಗೆ ಎಂದಿಗೂ ಸುಂದರವಾಗಿ ಕಾಣಲೇ ಇಲ್ಲ. ಅವುಗಳು ಕೊಳಕು, ಸೀಳುಸೀಳಾಗಿ ಹೊಡೆದು ಹೋಗಿ ಗಲೀಜಾಗಿ ಕಾಣುತ್ತಿದ್ದವು. ತನ್ನ ಸೊಬಗಿಗೆ ತನ್ನ ಕಾಲುಗಳ ಅಡ್ಡಿ ಎಂದೇ ಅವಳಿಗೆ ಬೇಸರ.  

ಸುಂದರಿಗೆ ತನ್ನ ಮೈಯ ನುಣುಪಿನ ಕುರಿತು, ಸೂರ್ಯನ ಬೆಳಕಿಗೆ ಅದು ಚಿನ್ನದ ಬಣ್ಣದಲ್ಲಿ ಹೊಳೆಯುವ ಕುರಿತು ತುಂಬಾ ಹೆಮ್ಮೆಯೆನಿಸುತ್ತಿತ್ತು. ಅದೇ ರೀತಿ ತನ್ನ ಸುರುಳುಸುರುಳಾದ ಉದ್ದದ ಕೋಡುಗಳ ಕುರಿತು, ಅವುಗಳ ನಾಟ್ಯ ಸಹಕಾರದ ಕುರಿತು ಅವಳಿಗೆ ಭಾರಿ ಅಭಿಮಾನ. ಆದರೆ ತನ್ನ ಕಾಲುಗಳ ವಾರೆಕೋರೆಯನ್ನು ನೋಡಿದೊಡನೆ ಅದಕ್ಕೆ ದುಃಖ ಒತ್ತರಿಸಿ ಬರುತ್ತಿತ್ತು. ಆ ಕಾಲುಗಳು ಓಡಿ ಓಡಿ ಜಡ್ಡು ಕಟ್ಟಿ, ಗಾಯಗಳಿಂದ ತುಂಬಿ ಹೋಗಿದ್ದವು. ಆದುದರಿಂದ ತನ್ನ ಕಾಲುಗಳ ಬಗ್ಗೆ ಅವಳಿಗೆ ಯಾವುದೇ ಅಭಿಮಾನ ಇರಲಿಲ್ಲ

ಹೀಗಿರಲು ಒಂದು ದಿನ ಕಾಡಿನ ಪಕ್ಕದ ಹಳ್ಳಿಯ ಬೇಟೆಗಾರರು ಕಾಡಿನ ಜಿಂಕೆ, ಕೋಣ, ಕಾಡು ಕುರಿ ಹೀಗೆ ಸಿಕ್ಕಸಿಕ್ಕ ಪ್ರಾಣಿಗಳ ಬೇಟೆಯಾಡಲು ಬಂದರು. ಈ ಸುದ್ದಿ ತಿಳಿದ ಎಲ್ಲಾ ಪ್ರಾಣಿಗಳು ಬೇಟೆಗಾರರ ಬಾಣಗಳಿಂದ ತಪ್ಪಿಸಿಕೊಳ್ಳಲು ಬೇಗನೇ ದಟ್ಟ ಕಾಡಿನೊಳಗೆ ಸೇರಿಕೊಂಡವು ಆದರೆ ಈ ಸುಂದರಿ ಮಾತ್ರ ತನ್ನ ಕೊಂಬುಗಳಿಗೆ ಎಣ್ಣೆ ಸವರುತ್ತಾ ಅವುಗಳ ಹೊಳೆತ ಕಾಣುತ್ತಾ ಮೈಮರೆತಿದ್ದಳು.

ಪ್ರಾಣಿಗಳನ್ನು ಹುಡುಕುತ್ತಾ ಬೇಟೆಗಾರರು ಸುಂದರಿಯ ಬಿಡಾರದ ಬಳಿ ಇನ್ನೇನೋ ತಲುಪಿದವು ಎನ್ನುವಾಗ ಒಮ್ಮೆಲೆ ಸುಂದರಿ ಎಚ್ಚೆತ್ತುಕೊಂಡು ಬೇಟೆಗಾರರ ಬಲೆಗಳಿಂದ ತಪ್ಪಿಸಿಕೊಳ್ಳಲು ಓಡತೊಡಗಿದಳು. ಇದ್ದ ಶಕ್ತಿಯನ್ನೆಲ್ಲಾ ಕಾಲುಗಳಿಗೆ ತಲುಪಿಸಿ ಜೀವದ ಭಯಕ್ಕೆ ಆಕೆ ಓಡಿದಳು.

ದುರಾದ್ರಷ್ಟಕ್ಕೆ ಆಕೆ ಓಡಿ ಓಡಿ ದಟ್ಟ ಮರಗಳ ನಡುವೆ ತಲುಪಿದಳು. ಆ ಮರಗಳ, ಕುರುಚಲು ಗಿಡಗಳ ಗೆಲ್ಲುಗಳು, ಮುಳ್ಳುಕಂಟಿಗಳು ವಿಪರೀತ ಗೊಜಲು ಗಂಟಿಯಾಗಿದ್ದು ಸುಂದರಿಯ ಉದ್ದದ, ಸುಂದರ, ಉರುಟುರುಟಾದ ಕೊಂಬುಗಳು ಆ ಕುರುಚಲು ಗೆಲ್ಲುಗಂಟಿಗಳ ನಡುವೆ ಸಿಲುಕಿ ಆಕೆ ಮುಂದೆ ಓಡಲಾಗದಂತಹ ಪರಿಸ್ಥಿತಿ ಉಂಟಾಯ್ತು.

ಹಿಂದಿನಿಂದ ಅಟ್ಟಿಸಿಕೊಂಡು ಬರುತ್ತಿರುವ ಬೇಟೆಗಾರರು - ಇಲ್ಲಿ ಸಿಲುಕಿಕೊಂಡಿರುವ ಕೊಂಬುಗಳು ಇವುಗಳ ನಡುವೆ ಜಿಂಕೆ ಅಪಾರ ಸಂಕಟ ಅನುಭವಿಸಿತು. ಆ ಜಾಲದಿಂದ ಬಿಡಿಸಿಕೊಳ್ಳಲು ಅದರ ಒದ್ದಾಟ ವಿಪರೀತವಾಯ್ತು. ತಾನು ಇಷ್ಟು ಕಾಲ ಕೊಂಬು ಕೋಡುಗಳನ್ನು ಹೊಗಳಿ ದಿನ ಕಳೆದದ್ದೆಲ್ಲಾ ಅದರ ನೆನಪಿಗೆ ಬಂತು.

ಆ ಹೊತ್ತಿಗೆ ಜಿಂಕೆಯ ಕಾಲುಗಳು ಎಚ್ಚರಗೊಂಡವು. ಹೇಗಾದರೂ ಮಾಡಿ ಈ ಜಾಲದಿಂದ ತಪ್ಪಿಸಿಕೊಳ್ಳಬೇಕೆಂದು ಒದ್ದಾಡತೊಡಗಿದವು. ಅವುಗಳ ಅಲುಗಾಟ, ನಲುಗಾಟ, ಒದ್ದಾಟ ವಿಪರೀತವಾದಾಗ ಜಿಂಕೆಯ ಮೈತುಂಬಾ ಶಕ್ತಿ ಪಸರಿಸಿತು. ಒಮ್ಮೆಲೆ ಅದು ಕೊಟ್ಟ ಸೆಳೆತಕ್ಕೆ ಜಿಂಕೆಯ ಕೊಂಬುಗಳು ಜಟಿಲ ಜಾಲದಿಂದ ಹೊರಬಿದ್ದವು.

ಈಗ ಜಿಂಕೆಯ ಕಾಲುಗಳು ಎಂದೂ ಕಂಡರಿಯದ ಓಟಕ್ಕೆ ಬಿದ್ದವು. ಹಳ್ಳ, ದಿಣ್ಣೆ ಕಾಡುಮೇಡನ್ನು ದಾಟಿ ಓಡಿದವು. ಜಿಂಕೆ ಬೇಟೆಗಾರರ ಮುಷ್ಟಿಯಿಂದ ತಪ್ಪಿಸಿಕೊಂಡಿತು. ಅದಕ್ಕಿಂತ ಮಿಗಿಲಾಗಿ ಅದು ತಾನು ಹೊಂದಿದ್ದ ತಪ್ಪು ಕಲ್ಪನೆಯಿಂದ ಹೊರ ಬಂದಿತು. ಈ ತನಕ ಅದು ತನ್ನ ಒಂದು ಸಾಮರ್ಥ್ಯವನ್ನು ಅತಿಯಾಗಿ ಸತ್ಕರಿಸಿ ಇತರ ಸಾಮರ್ಥ್ಯಗಳನ್ನು ತುಚ್ಛೀಕರಿಸಿತ್ತು. ಈಗ ಅದಕ್ಕೆ ತನ್ನ ತಪ್ಪಿನ ಅರಿವಾಯ್ತು.

ನಮ್ಮ ನಿತ್ಯ ಬದುಕಿನಲ್ಲಿ ನಾವೂ ಹೀಗೆ ಮಾಡುವುದುಂಟೆ?. ನಮ್ಮಲ್ಲಿನ ಎಲ್ಲಾ ಸಾಮರ್ಥ್ಯಗಳನ್ನು, ಪ್ರತಿಭೆಗಳನ್ನು, ಕೌಶಲ್ಯಗಳನ್ನು ಗುರುತಿಸದೆ, ಗೌರವಿಸದೆ ಬಿಟ್ಟದ್ದುಂಟೆ?, ನಮ್ಮ ಪಂಗಡದ ಜತೆಗಾರರ ಪೈಕಿ ಯಾರನ್ನಾದರೂ ಸೂಕ್ತವಾಗಿ ಗುರುತಿಸದೆ, ಸ್ವೀಕರಿಸದೆ, ಗೌರವಿಸದೆ ದೂರ ಇಟ್ಟ ಸಂದರ್ಭಗಳಿವೆಯೇ?

-ಸ್ಟೀವನ್ ಕ್ವಾಡ್ರಸ್