ಸೂರ್ಯನ ಮೇಲೆ ಮನೆ?

Thumbnail

ಸೂರ್ಯನ ಮೇಲೆ ಮನೆ?

 

ಅಕ್ಕನ ಸ್ನೇಹಿತೆಯೊಬ್ಬರ ಮನೆಶಾಸ್ತ್ರ(ಎಂಗೇಜ್ಮೆಂಟ್)ಕ್ಕೆಂದು ಟಿ. ನರಸೀಪುರಕ್ಕೆ ನಾನು, ನನ್ನಕ್ಕ ಮತ್ತು ಅಕ್ಕನ ಮಗ ವಿಶ್ವ ವಿಜಯ್ ಹೋಗಿದ್ದೆವು. ರಸ್ತೆಯ ಬದಿಗಳಲ್ಲಿಯೇ ಹಚ್ಚ ಹಸುರಿನ ಗದ್ದೆಗಳನ್ನು ಮತ್ತು ಪ್ರಕೃತಿಯನ್ನು ನೋಡಿ ಮನಸ್ಸಿಗೆ ಮುದ ಉಂಟಾಗಿತ್ತು. ಹೋಗಿದ್ದ ಕಾರ್ಯ ಮುಗಿದ ಒಂದಷ್ಟೊತ್ತಿನ ಮೇಲೆ ಅಲ್ಲಿಂದ ಮರಳಿ ಮಂಡ್ಯದತ್ತ ಹೊರಟೆವು. ಸಂಜೆಯ ಆ ನೋಟ ಇನ್ನಷ್ಟು ಗರಿಗರಿಯಾಗಿತ್ತು. ಇದನ್ನೆಲ್ಲಾ ಕಂಡು ಮನಸೋಲ್ಲಾಸದಿಂದ ದ್ವಿಚಕ್ರ ವಾಹನವನ್ನು ಚಲಿಸುತ್ತಿದ್ದೆ. ಆರೇಳು ವರ್ಷದ ನಮ್ಮ ವಿಶ್ವ ವಿಜಯ್ ಒಬ್ಬ ಪುಂಡ ಹೈದ. ಅವನಿಗೆ ಅಲ್ಲಲ್ಲಿ, ಅದೇನೇನೋ ಪ್ರಶ್ನೆಗಳು ಮೂಡಿಬಿಡುತ್ತವೆ. ಆ ವಯಸ್ಸಿನ ಮಕ್ಕಳಲ್ಲಿ ಅದು ಅಂತಹ ವಿಶೇಷ ಸಂಗತಿಯೇನಲ್ಲ ಬಿಡಿ. ಆದರೂ ಅವನ ತುಂಟಾಟ ತನ್ನ ವಯಸ್ಸಿನ ಮಕ್ಕಳಿಗಿಂತ ಸ್ವಲ್ಪ ಜಾಸ್ತಿಯೇ ಇದೆ. ಮಾಮ-ಮಾಮ ಅದೇನು? ಇದ್ಯೇನು? ಅದ್ಯಾಕ್ ಹಂಗದೆ? ಇದ್ಯಾಕ್ ಒಳ್ಳೆ ಹಿಂಗದಲ್ಲಾ? ಹಾಗೆ, ಹೀಗೆ ಎಂದು ಬೆರಳು ತೋರಿಸುತ್ತಾ ಏನೇನೋ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿಬಿಟ್ಟ. ಅಕ್ಕ, ನಾನು ಇಬ್ಬರೂ ನಮ್ಮ ಸಾಮರ್ಥ್ಯಕ್ಕನುಸಾರವಾಗಿ ಅವನಿಗೆ ಉತ್ತರಗಳನ್ನು ಹೇಳಿಕೊಡುತ್ತಲೇ ಮುಂದೆ ಸಾಗುತ್ತಿದ್ದೆವು. ಅವನ ಪ್ರಶ್ನೆ ಕೇಳುವ ಬಿರುಸು ತಾರಕಕ್ಕೇರಿತ್ತು ಅನ್ಸಿದ್ದು ಅವನು ಕೇಳಿದ ಒಂದು ಪ್ರಶ್ನೆಯಿಂದ. ಬಹುಶಃ ನಾನು ನನ್ನ ಜೀವನದ ಈ ಘಟ್ಟದವರೆಗೂ ಕೇಳಿರಬಹುದಾದ ಅತ್ಯಂತ ವಿಚಿತ್ರ, ವಿಸ್ಮಯ ಮತ್ತು ವಿಶಿಷ್ಟ ಪ್ರಶ್ನೆಗಳಲ್ಲಿ ಇದೂ ಕೂಡ ಒಂದು; “ಮಾಮ ಸೂರ್ಯನ ಮೇಲೆ ಮನೆ ಕಟ್ಟಬಹುದಾ?” ಈ ಪ್ರಶ್ನೆ ಕೇಳಿ ನನ್ನೆದೆ ಢಗ್ ಎಂದುಬಿಟ್ಟಿತು. ನಾನು ಒಂದು ಕ್ಷಣಕ್ಕೆ ಮೂಕನಾದೆ. “ಇಲ್ಲ, ಆಗಲ್ಲ” ಎಂದು ಉತ್ತರಿಸಲು ತಬ್ಬಿಬ್ಬಾಗಿ ಸುಮ್ಮನಾದೆ ಮತ್ತು ನನ್ನ ಈ ಹೊತ್ತಿನ ಯೋಚನಾ ಸಾಮರ್ಥ್ಯವನ್ನು ಅದೆಷ್ಟೋ ಪಟ್ಟು ಮೀರಿದ ಪ್ರಶ್ನೆ ಅದು! ಈ ನಡುವೆ ನನ್ನಕ್ಕ “ಲೋ ಏನ್ ಹುಚ್ ಹುಚ್ ಪ್ರಶ್ನೆ ಕೇಳ್ತೀಯ ಸುಮ್ನೆ ಕೂತ್ಕೋಳೋ” ಎಂದಳು. ಅವನು ಗಲಿಬಿಲಿಗೊಂಡ. ನನಗೆ ಯಾಕೋ ಸುಮ್ಮನಿರಲಾಗಲಿಲ್ಲ. “ನಮ್ಮ ಜಗತ್ತು ಕಂಡ ಸರ್ವಶ್ರೇಷ್ಠ ವಿಜ್ಞಾನಿಗಳಿಗೆ ಹೊಳೆಯಬಹುದಾದ ಮಟ್ಟದ ಪ್ರಶ್ನೆ ಇದು” ಎಂದು ಅಕ್ಕನಿಗೆ ಹೇಳಿದೆ. ಅವರಿಗೆಲ್ಲಾ ಇಂತಹ ಹುಚ್ಚು ಹುಚ್ಚಾದ ಪ್ರಶ್ನೆಗಳು ಮೂಡಿದ್ದರಿಂದಲೇ ಇಂದು ಪ್ರಪಂಚದಲ್ಲಿ ಇಷ್ಟೆಲ್ಲಾ ಆವಿಷ್ಕಾರಗಳು ಆಗಿರುವುದು & ಮತ್ತು ಮನುಕುಲದ ಜೀವನ ಇಷ್ಟು ಸುಖಕರವಾಗಿರುವುದು” ಎಂದೆ.

 

ಅಕ್ಕನಿಗೂ ಅದು ಥಟ್ ಅಂತ ಅರ್ಥವಾಗಿದ್ದು ಅವಳ ನಿಶ್ಯಬ್ದದಿಂದ ನನಗೆ ಭಾಸವಾಯ್ತು. ನಾನು ಮುಂದುವರೆದು ಹೇಳಿದೆ “ಮಕ್ಕಳು ಹುಟ್ಟುತ್ತಲೇ ಅದೆಷ್ಟೋಕುತೂಹಲಗಳುಳ್ಳ ಶ್ರೇಷ್ಠ ಜ್ಞಾನಿಯಾಗಿ ಹುಟ್ಟುತ್ತಾರೆ. ಆದರೆ ಹಿರಿಕರಾದ ನಾವು ಅವರನ್ನು ನಮ್ಮೆಲ್ಲಾ ಶ್ರಮವನ್ನು ಉಪಯೋಗಿಸಿ ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತೇವೆ”. ಅದು ಹಾಗಲ್ಲ, ಇದು ಹೀಗಲ್ಲ, ಹೀಗೆ ಇರಬೇಕು, ಹಾಗೆ ಇರಬಾರದು, ಹೀಗೆಲ್ಲಾ ಯೋಚನೆ ಮಾಡಬಾರದು ಎಂದೆಲ್ಲಾ ಅಸಂಖ್ಯಾತ ಸರಪಳಿಗಳಿಂದ ಬಂಧಿಸಿಅವರ ನೈಜ ಸಾಮರ್ಥ್ಯವುಳ್ಳ ಬುದ್ಧಿಯನ್ನು ಸುಟ್ಟು ಹಾಕಿ ಅವರ ತಲೆಯಲ್ಲಿ ಬೂದಿಯನ್ನಷ್ಟೇ ತುಂಬಿಬಿಡುತ್ತೇವೆ. ಅದೊಂದು ದುರಂತವಲ್ಲದೆ ಮತ್ತಿನೆನ್ನೇನು? ಇದರ ಜೊತೆ-ಜೊತೆಗೆ ನಮ್ಮ ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶದ ಕೆಲವು ಸಾಲುಗಳೂ ನೆನಪಾದವು: “ಪ್ರತಿಯೊಂದು ಮಗುವೂ ಹುಟ್ಟುತ್ತಲೇ - ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು “ಅಲ್ಪಮಾನವ”ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು.

 

ಪ್ರಶ್ನೆ ಕೇಳಲು ಮಕ್ಕಳನ್ನು ಉತ್ತೇಜಿಸಬೇಕು. ಅವರ ಕುತೂಹಲದ ಹಸಿವು ತೃಪ್ತಿಯಾಗೋವರೆಗೂ ಅವರನ್ನು ಪ್ರಶ್ನಿಸಲು ಬಿಡಬೇಕು. ಅವರು ನಮಗೆ ಅರ್ಥವಾಗದ ಅಥವಾ ಅರ್ಥವಾಗಿಯೂ ಉತ್ತರಿಸಲಾಗದ ಪ್ರಶ್ನೆಗಳನ್ನು ಕೇಳಿದ್ದೇ ಆದಲ್ಲಿ, ನಾವು ನಮ್ಮ ಅಲ್ಪ ಜ್ಞಾನವನ್ನು ಒಪ್ಪಿಕೊಂಡು ತಂತ್ರಜ್ಞಾನವನ್ನು ಬಳಸಿಯೋ ಅಥವಾ ವಿಷಯ ತಜ್ಞರಿಂದ ಉತ್ತರ ಪಡೆದುಕೊಂಡೋ ಅದನ್ನು ಮಕ್ಕಳಿಗೆ ತಲುಪಿಸಲು ಪ್ರಯತ್ನಿಸಬೇಕು. ಹೌದಲ್ಲವೇ? ನೆನಪಿರಲಿ, ಪ್ರಪಂಚದಲ್ಲಿ ಅರ್ಥವಿಲ್ಲದ ಪ್ರಶ್ನೆ ಅನ್ನೋದು ಯಾವುದೂ ಇಲ್ಲ! ಮತ್ತು ಅವರ ಕುತೂಹಲವನ್ನು ಕೊಂದರೆ ಅವರ ಜ್ಞಾನದ ರಾಜಮಾರ್ಗವನ್ನು ಮುಚ್ಚಿದಂತೆಯೇ ಸಮ!

 

ತುಸು ವೇಳೆ ನಂತರ “ಸೂರ್ಯನ ಶಾಖ ಅಗಾಧವಾಗಿರುವ ಕಾರಣ, ಮನುಷ್ಯರಲ್ಲಿ ಇಂದಿನವರೆಗೂ ಸಂಪಾದಿಸಿರುವ ತಂತ್ರಜ್ಞಾನ ಶಕ್ತಿಯಿಂದ ಸೂರ್ಯನ ಮೇಲೆ ಮನೆ ಕಟ್ಟಲು ಸಾಧ್ಯವಾಗಿಲ್ಲ. ಹಾಗೂ ಅದು ಕಷ್ಟ ಸಾಧ್ಯವೆಂದೇ ಅರ್ಥೈಸಲಾಗಿದೆ. ಅದಾಗ್ಯೂ ಮುಂದೊಂದು ದಿನ ಸಾಧ್ಯವಾದರೂ ಆಗಬಹುದೇನೋ, ನೋಡಬೇಕಿದೆ” ಎಂದು ಅವನಿಗೆ ತಿಳಿಯೋ ಹಾಗೆ ಹೇಳಿಕೊಟ್ಟೆ. ಅದೇನು ಖುಷಿಯಾಯಿತೋ ಅವನಿಗೆ ನಾಕಾಣೆ. ಜೋರು ಕೇಕೆ ಹಾಕಿದವನೇ ಮತ್ತೆ ಪ್ರಶ್ನೆ ಕೇಳುವುದನ್ನು ಮುಂದುವರೆಸಿದ. ಮುಸ್ಸಂಜೆಯ ನಸುಗೆಂಪು ಸೂರ್ಯನತ್ತ ನೋಡುತ್ತಾ ಚಂದದ ಮನೆಯೊಂದನ್ನು ಊಹಿಸಿಕೊಂಡೆ...

 

                                  ✍🏻 ನಂದೀಶ್ ವೈ. ಡಿ.