ಹುಚ್ಚು ಮಿಡತೆಯ ಕಥನ

Thumbnail

ಮಲೆನಾಡಿನ ಒಂದು ಸುಂದರ ಹಳ್ಳಿಯಲ್ಲಿ ಆಲದ ಮರದಡಿಯಲ್ಲಿ ಇರುವೆಗಳು ತಮ್ಮ ಹುತ್ತ ಕಟ್ಟಿಕೊಂಡಿದ್ದವು. ಇರುವೆಗಳ ರಾಶಿಯಲ್ಲಿ ಎಲ್ಲರೂ ದಿನವಿಡೀ ದುಡಿಯುವ ತಮಮ್ ಕೆಲಸಗಳನ್ನು ಶಿಸ್ತಿನಿಂದ ನಿಭಾಯಿಸುವ ಚಾಳಿ ಹೊಂದಿದ್ದವು. ದೊರೆತ ಸಣ್ಣಪುಟ್ಟ ತಿಂಡಿ ತುಣುಕುಗಳನ್ನು ಹುತ್ತಕ್ಕೆ ಹೊತ್ತೊಯ್ದು ತಮ್ಮ ಭವಿಷ್ಯದ ಅಗತ್ಯಗಳಿಗೆ ತಯಾರಿ ಮಾಡುತ್ತಿದ್ದವು.

ಅದೇ ಮರದ ಬಳಿಯ ಪೊದೆಯೊಂದರಲ್ಲಿ ಒಂದು ಮಿಡತೆ ಹಾರಾಡುತ್ತಾ ಇರುತ್ತಿತ್ತು. ದುಡಿತದ ಆಲೋಚನೆಯ ಹಾಗೂ ಎಂದಿಗೂ ದುಡಿಯುತ್ತಾ ಇರುವ ಇರುವೆಗಳನ್ನು ಕಂಡು ಅದು ಗೇಲಿ ಮಾಡುತ್ತಿತ್ತು. 'ಎಲೈ ಇರುವೆಗಳೇ ನೀವು ದುಡಿದು ಏನು ದೊಡ್ಡ ಕಟ್ಟೆ ಹಾಕಲಿಕ್ಕಿದೆ, ಇರುವು ಮೂರು ದಿನದ ಬದುಕು ಬನ್ನಿ ನಾವು ಸಂತೋಷದಿಂದ ಕುಣಿದು ಕುಪ್ಪಳಿಸಿ ದಿನ ಸಾಗಿಸೋಣ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ' ಎಂದು ಇರುವೆಗಳನ್ನು ತನ್ನಂತೆ ಆಡುತ್ತಾ, ಹಾಡುತ್ತಾ, ಕುಣಿಯುತ್ತಾ ಹೊತ್ತು ಸಾಗಿಸಲು ಕರೆಯುತ್ತಿತ್ತು.

ಕೆಲವು ಸಣ್ಣಪುಟ್ಟ ಇರುವೆಗಳು ಮಿಡತೆಯ ಕರೆಗೆ ಸಂತೋಷದಿಂದ ಬಂದು ಸೇರಿದವು. ಆದರೆ ಹೆಚ್ಚಿನ ಇರುವೆಗಳು, ?ಮಿಡತೆಯೇ ನಿನ್ನ ಆಟ ಎಂದಿಗೂ ಒಂದೇ, ಬಹುಶಃ ನಿನಗೆ ಹಸಿವು ಇದ್ದಂತಿಲ್ಲ, ನೀನು ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಸಲೀಸಾಗಿ ಹಾರುವೇ ನಮಗಾದರೂ ನಮ್ಮ ಆಹಾರಕ್ಕಾಗಿ ದುಡಿಯುತ್ತಾ ಇರಬೇಕಾಗುತ್ತದೆ, ನಿನ್ನೊಡನೆ ಆಡಲು ನಮಗೆ ಸಮಯವಿಲ್ಲ? ಎಂದು ಅದಕ್ಕೆ ಉತ್ತರ ನೀಡಿದವು ಮಾತ್ರವಲ್ಲ ಅದರ ಜತೆ ಸೇರುತ್ತಿದ್ದ ಇರುವೆಗಳಿಗೆ ಬುದ್ದಿ ಹೇಳಿ ಅವುಗಳನ್ನು ತಮ್ಮ ಜತೆ ಎಳೆದುಕೊಂಡು ಕೆಲಸಕ್ಕೆ ಹಚ್ಚಿದವು.

ಬೇಸಿಗೆ ಕಳೆದು ಮಳೆಗಾಲ ಬಂತು. ಒಂದು ದಿನ ಮಿಡತೆಯು ಇರುವೆಗಳ ಬಳಿ ಬಂದು ?ನನಗೆ ಸ್ವಲ್ಪ ಆಹಾರ ಕೊಡಿ, ತುಂಬಾ ಹಸಿವಾಗಿದೆ? ಎಂದು ದೀನತೆಯಿಂದ ಬೇಡತೊಡಗಿತು. ಇರುವೆಗಳಿಗೆ ಇದನ್ನು ಕಂಡು ಆಶ್ಚರ್ಯವಾಯ್ತು. ಅವುಗಳು ಮಿಡತೆಯು ತನಗೆ ಬೇಕಾದಷ್ಟು ಆಹಾರ ಇಟ್ಟುಕೊಂಡು ಆಡಲು ಬರುತ್ತದೆ ಅಂದುಕೊಂಡಿದ್ದವು.

ಈಗ ಇರುವೆಗಳು ಒಟ್ಟಾಗಿ, ?ನೀನು ಬೇಸಿಗೆಯಲ್ಲಿ ಬೇಕಾದ ಆಹಾರ ಸಂಗ್ರಹ ಮಾಡಿಲ್ಲವೇ?? ಎಂದು ಕೇಳಿದವು. ಮಿಡತೆ ನೋವಿನಿಂದ, ?ನಾನು ನಿಮ್ಮ ಮಾತು ಕೇಳದೆ ತಪ್ಪು ಮಾಡಿದೆ. ನಾನು ಹಾಡುತ್ತಾ, ಕುಣಿಯುತ್ತಾ ಬೇಸಿಗೆ ಕಳೆದು ಹೋದದ್ದೇ ನನಗೆ ತಿಳಿಯಲಿಲ್ಲ, ಈಗ ನನ್ನ ಬಳಿ ಒಂದು ತುಣುಕು ಆಹಾರ ಇಲ್ಲ, ದಯಮಾಡಿ ನನಗೇನಾದರೂ ತಿನ್ನಲು ಕೊಡಿ? ಎಂದು ಕೇಳಿತು.

ಇರುವೆಗಳಿಗೆ ತುಂಬಾ ಬೇಜಾರಾಗಿ ಅವುಗಳು ತಮ್ಮ ಬಳಿಯಿದ್ದ ಸ್ವಲ್ಪ ಆಹಾರದಲ್ಲಿ ಮಿಡತೆಗೂ ಸಣ್ಣ ಪಾಲು ನೀಡಿದವು.

ಹೆಚ್ಚೇನೂ ಹೇಳಬೇಕಾಗಿಲ್ಲ ಯುವ ಮಿತ್ರರೇ, ಬಿಸಿಲಿರುವಾಗ ಹುಲ್ಲು ಸಿದ್ಧಗೊಳಿಸದಿದ್ದರೆ ಮಳೆ ಬಂದಾಗ ಮೇಲೆ ನೋಡಬೇಕಾಗುತ್ತದೆ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ನಿಜ ನಮ್ಮ ಹೊಟ್ಟೆ ಸರಿಯಾದ ರೀತಿಯಲ್ಲಿ ತುಂಬಿಕೊಳ್ಳಲು ಬೇಕಾದ ವ್ಯವಸ್ಥೆಗಾಗಿ ನಮಗೆ ಅರಿವು, ಕೌಶಲ್ಯಗಳು, ಪ್ರತಿಭೆ ಹಾಗೂ ಸಾಮರ್ಥ್ಯಗಳನ್ನು ದೇವರು ಕೊಟ್ಟಿದ್ದಾನೆ. ಅವುಗಳ ಸೂಕ್ತ ಬಳಕೆಯಿಂದ ನಮ್ಮ ಭವಿಷ್ಯಕ್ಕೆ ಸರಿಯಾದ ಬುನಾದಿ ಹಾಕಿಕೊಳ್ಳಬೇಕು. ನಮ್ಮ ಬುನಾದಿ ಭದ್ರವಾದರೆ ಇನ್ನೂ ಹಲವಾರು ಮಂದಿಯ ಬದುಕಿಗೆ ಬೆಳಕು ತರುವ ಸಾಮರ್ಥ್ಯ ನಮ್ಮಲ್ಲಿ ಬೆಳೆಯುತ್ತದೆ. ಹಾಗೇ ಮಾಡದೆ ನಿತ್ಯ ನಿರಂತರ ನಿರ್ಲಕ್ಷ್ಯದಿಂದ ಬದುಕನ್ನು ಸಾಗಿಸಿದರೆ ನಮ್ಮ ಸ್ವಂತ ವ್ಯಕ್ತಿತ್ವಕ್ಕೆ, ನಮ್ಮನ್ನು ನಂಬಿರುವ ನಮ್ಮ ಕುಟುಂಬಕ್ಕೆ, ಸಮಾಜಕ್ಕೆ, ರಾಷ್ಟ್ರಕ್ಕೆ ನಾವು ಅನ್ಯಾಯ ಮಾಡುತ್ತೇವೆ.

ಮೊಬಾಯ್ಲಿನ ಅತಿ ಬಳಕೆ, ಮನೋರಂಜನೆ ಹಾಗೂ ಮೋಜಿಗೆ ಹೆಚ್ಚಿನ ಸಮಯ ನೀಡುವುದು, ನಮ್ಮ ದಿನನಿತ್ಯದ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡದಿರುವುದು ನಮ್ಮನ್ನು ನಾವೇ ಮೂಲೆಗುಂಪು ಮಾಡಲು ಲಭ್ಯವಿರುವ ಸಾಧನಗಳು. ನಮ್ಮಲ್ಲಿರುವ ಅಪಾರ ಸಾಮರ್ಥ್ಯವನ್ನು ಅರಿತುಕೊಂಡು ಸಧ್ಬಳಕೆ ಮಾಡಲು ನಿರಂತರ ಕ್ರಿಯಾಶೀಲರಾಗಿರೋಣ.