ಜಾತ್ರೆ

Thumbnail

ತೊಗರ್ಸಿ ಜಾತ್ರೆ ಮತ್ತು ನಮ್ಮವ್ವ

ಹೀಗೊಂದು ಲಹರಿ

ವಿಜಯಾ ಯು. ಪಾಟೀಲ

ಗೃಹವಿಜ್ಞಾನ ಸಹಾಯಕ ಪ್ರಾದ್ಯಾಪಕರು

ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಹಾಸನ

 

ಜನೇವರಿಯಿಂದ ಸರಿಸುಮಾರು ಎಪ್ರೀಲ್‌ ವರೆಗೆ ಜಾತ್ರೆಗಳದ್ದೇ ಹವಾ. ಕೋವಿಡ್‌ ಮಹಾಮಾರಿಯಿಂದಾಗಿ ಎರಡು ವರ್ಷ ಇವೆಲ್ಲಾ ಸಂಭ್ರಮಗಳು ಮರೆಯಾಗಿದ್ವು , ಅದರೆ ಈ ಬಾರಿ ಎಲ್ಲ ಕಡೆ ಜಾತ್ರೆಗಳು ಜೋರಾಗಿಯೇ ಸದ್ದು ಮಾಡುತ್ತಿವೆ. ಹೀಗೆ ಸಾಂಪ್ರದಾಯಿಕ ಉತ್ಸವಗಳನ್ನು ನೋಡುವುದೂ ಮತ್ತು ಭಾಗವಹಿಸುವುದೂ ಎರಡೂ ಚೆಂದವೇ. ಹೀಗೆ ಮೊನ್ನೆ ಮಾರ್ಚ ೧೨ ರಂದು ಬಹಳ ವರ್ಷಗಳ ನಂತರ ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿಯ ( ನಮಗೆಲ್ಲಾ ತೊಗರ್ಸಿ ಮಲ್ಲಯ್ಯಾ) ಸಣ್ಣ ತೇರಿಗೆ ಹೋಗಿ ಬಂದಾಗಲಾಯ್ತು ಬರೀಬೇಕು ಅನಿಸ್ತಿದೆ.

ಸಣ್ಣ ತೇರು ಅಂದೆ, -  ತೊಗರ್ಸಿ ಮಲ್ಲಯ್ಯನ ಜಾತ್ರೆ ಎಂದರೆ ಎರಡು ದಿನ ತೇರೆಳೆಯುವುದು , ಉಳಿದ ದಿನ ದೇವರ ದರ್ಶನ , ಹಣ್ಣು ಕಾಯಿ ಮಾಡಿಸುವುದು , ಜಾತ್ರೆಯಲ್ಲಿ  ಓಡಾಟ, ಬಳೆ , ಬೆಂಡು , ಬತ್ತಾಸ, ಮಂಡಕ್ಕಿ, ಖಾರಾ, ದಾಣಿ, ಭಾಂಡೆ , ಅಲ್ಲದೇ ಮುಖ್ಯವಾಗಿ ಸಣ್ಣ ಮಕ್ಕಳಿರುವವರ ಆಟಿಗೆ ಸಾಮಾನುಗಳ ಖರೀದಿ. ನಾಟಕ ನೋಡುವುದು ಹೀಗೆ ಉಲ್ಲಾಸ ಉತ್ಸಾಹ. ಮೊದಲ ದಿನ ಸಣ್ಣ ತೇರು , ಎರಡನೆ ದಿನ ದೊಡ್ಡ ತೇರು ಆದರೆ ನಾನೆಂದೂ ನೋಡೇ ಇಲ್ಲಾ , ಯಾಕೆಂದ್ರೆ ತೇರೆಳೆಯುವುದು ಬೆಳಗು ಮುಂಜಾನೆ 6 ಗಂಟೆಯೊಳಗೆ. ಆದರೆ ಅದರ ವೈಭವ ನಮ್ಮವ್ವನ ಬಾಯಲ್ಲಿ ಕೇಳಿ ಕೇಳಿ ನೋಡಿದಷ್ಟೇ ಕಣ್ಣ ಮುಂದಿದೆ.

ತಿಂಗಳಿಗೊಂದು ಅಮವಾಸ್ಯೆ ಬರುತ್ತದಾದರು ನಮ್ಮವ್ವನ ಉತ್ಸಾಹಕ್ಕೇನೂ ಕೊರತೆ ಇಲ್ಲಾ, ಹೋಳಿಗೆ(ಕಡ್ಲೆಬೇಳೆ ಹೂರಣ) ಮಾಡುವುದು ಈಗ ಕಡಿಮೆ ಆಗಿದೆಯಾದರೂ ದೊಡ್ಡ ಅಮವಾಸೆ, ಹಬ್ಬ ಅಂತ ಮಾಡಿತ್ತಲೇ ಇರುತ್ತಾಳೆ. ಇನ್ನು ಅದಿಲ್ಲದಿದ್ದರೆ ಸಜ್ಜಕದ (ರವಾದ ಹೂರಣ) ಹೋಳಿಗೆ, ಶಾವಿಗೆ ಪಾಯಸ, ಶಾವಿಗೆ ಬಸಿದು ಅದಕ್ಕೆ ಬೀಸಿದ ಸಕ್ಕರೆ(‌ ಬೂರಾ ಸಕ್ಕರೆ /ಸಕ್ಕರೆ ಪುಡಿ) (ಯುಗಾದಿ ಸ್ಪೆಷಲ್), ಸಜ್ಜಕ ( ರವಾ +ಬೆಲ್ಲ), ಶಿರಾ (ರವಾ+ಸಕ್ಕರೆ), ಹುರಕ್ಕಿ ಹೋಳಿಗೆ (ನವಣೆಕ್ಕಿಯ ಹೂರಣ) ದೀಪಾವಳಿ ಸ್ಪೆಷಲ್‌, ಏನು ಮಾಡುವುದಿಲ್ಲಾ ಅಂದರೂ ದಿನಾಲು ದೇವರಿಗೆ ಬಾಳೆಹಣ್ಣಿನ ಎಡಿ (ನೈವೇದ್ಯ) ಅಂತೂ ಇದ್ದೇಇರುತ್ತದೆ , ಸ್ವಲ್ಪ ಅವಕಾಶ ಸಿಕ್ಕರೆ ಬಾಳೆ ಹಣ್ಣು + ಸಕ್ಕರೆ+ ಹಾಲು ಸೇರಿ ಬಾಳೆ ಹಣ್ಣಿನ ಸೀಕರಣೆಯೂ ಅಗುತ್ತದೆ, ಇನ್ನು ಆವಾಗಾವಾಗ ಕಡುಬು ( ಕಡ್ಲೆಬೇಳೆ+ಬೆಲ್ಲದ ಹೂರಣ), ಮಾವಿನ ಹಣ್ಣಿನ ಕಾಲದಲ್ಲಿ ಮಾವಿನ ಹಣ್ಣಿನ ಸೀಕರಣೆ, ಹಾಲು ಸಕ್ಕರೆ, ಕಲ್ಲು ಸಕ್ಕರೆ, ಹೀಗೆ ದೇವರಿಗೆ ವರೈಟಿ ಸಿಹಿ ಗಳಂತೂ ಇದ್ದೇ ಇರುತ್ತದೆ. ಒಟ್ಟಾರೆ ದೇವರನ್ನು ಉಪವಾಸವಂತೂ ನಮ್ಮವ್ವ ಇರಲಿಕ್ಕೆ ಬಿಡುವುದಿಲ್ಲ. ಇನ್ನು ಮಲ್ಲಯ್ಯನ ಜಾತ್ರೆ ಅದೂ ಮನೆ ದೇವರು (ಗಂಡು ದೇವರು ಯಾಕೆಂದರೆ ಮನೆಯ ಹೆಣ್ಣು ದೇವರು ಬಾದಾಮಿಯ ಬನಶಂಕರಿ ದೇವಿ) ಹಂಗ ಬಿಡಾಕಾಕ್ಕತಾ ಮಾಲ್ದಿ ಕುಟ್ಟಲೇ ಬೇಕು.

ಮಾಲ್ದ, ಮಾದ್ಲಿ, ಮಾದೇಲಿ, ಮಾಲೇದಿ ಅಂತೆಲ್ಲಾ ಕರೆಯಿಸಿಕೊಳ್ಳುವ ಈ ಸಿಹಿ ತಿಂಡಿಯಂತೂ ತಿಂದವನೇ ಬಲ್ಲಾ. ಗೋಧಿ , ಕಡ್ಲಿಬ್ಯಾಳಿ ಬೀಸಿ(ಈಗ ಗಿರಣಿಯಲ್ಲಿ) , ಗೋಧಿ ರೊಟ್ಟಿ ಮಾಡಿ ಅವು ಬಿಸಿ ಇದ್ದಾಗನ ಮುರುದು ಅದನ್ನೂ ಗಿರಣಿಯಲ್ಲಿ ಪುಡಿ ಮಾಡಿಸಿ ,ಅದಕ್ಕೆ ಬೆಲ್ಲ ಪುಡಿ ಮಾಡಿ ಕೂಡಿಸಿ , ಅಲ್ಲೋಂದು ಇಲ್ಲೋಂದು ಕಾಣುವ ಹಾಗೆ (ಬಾಯಿಗೆ ಸಿಗುವ ಹಾಗೆ) ಪುಟಾಣಿ , ಹೆರೆದ ಒಣ ಖೊಬ್ರಿ ಸೇರಿಸಿದರೆ ರೆಡಿ. ಕೆಲವು ಕಡೆ ಬರೇ ಕಡ್ಲಿಬ್ಯಾಳಿಯ ಮಾಲ್ದಿ ಮಾಡುವುದೂ ಇದೆ. ಇನ್ನು ಇದನ್ನು ತಿನ್ನುವುದಕ್ಕೆ ಒಂದು ವಿಧಾನ ಇದೆ. ರವಾದಕ್ಕಿಂತ ಸ್ವಲ್ಪ ದೊಡ್ಡ ಕಾಳಿನಂತೆ ಇರುವ ಇದಕ್ಕೆ ಬರಿ ತುಪ್ಪ ಹಾಕಿಕೊಂಡು ಸ್ವಲ್ಪ ಉದುರುದುರಾಗಿ ಮೆಲ್ಲಬಹುದು, ಇಲ್ಲದಿದ್ದರೆ ತುಪ್ಪ ಮತ್ತು ಸ್ವಲ್ಪವೇ ಹಾಲು ಹಾಕಿಕೊಂಡು ಮೆತ್ತಗೆ ಮಾಡಿಕೊಂಡು ಅಥವಾ ತುಪ್ಪ ಮತ್ತು ಜಾಸ್ತಿ ಹಾಲು ಹಾಕಿಕೊಂಡು ಸ್ವಲ್ಪ ಇನ್ನೂ ಮೆತ್ತಗೆ ಮಾಡಿಕೊಂಡು ತಿನ್ನಬಹುದು. ಯಾವಾಗ ಮಾಲ್ದಿ ಮಾಡಿದಾಗಲೂ ನಮ್ಮವ್ವ ಹೆಂಗಾಗೈತಿ ಅಂತ ಕೇಳತಾಳ, ಮತ್ತ ತಾನ ಹೇಳತಾಳ ಈ ಸಲ ಮಸ್ತ ಆಗೇತಿ ನೋಡು ಕಣ್ಣಾಗ ಹಾಕಿ ಒತ್ತಿಕೊಬೇಕು ನೋಡು ಹಂಗಾಗೈತಿ { ನನಗೂ ಇಲ್ಲೀತನಕ ಹಂಗಂದ್ರೇನು ಅಂತ ಗೊತ್ತಾಗಿಲ್ಲ ಬಹುಶಃ Correct Consistancyಗೆ ಹಂಗ ಹೇಳುತ್ತಾರೆ} ಅಂತಾಳ, ಈ ಕಣ್ಣಾಗ ಹಾಕಿ ಒತ್ತಿಕೊಬೇಕು ನೋಡು ಹಂಗಾಗೈತಿ ಅನ್ನೋ ಡೈಲಾಗ್‌  ಇದಕ್ಕಷ್ಟ ಅಲ್ಲಾ ಖಾರದ ಪುಡಿ ಮಾಡಿಸಿಕೊಂಡು ಬಂದಾಗ , ಅರಿಷಿಣ ಕುಟ್ಟಿಸಿಕೊಂಡು ಬಂದಾಗಲೂ ಇರತೈತಿ ಜೊತೆಗೆ ಎಂಥಾ ಬಣ್ಣ ಬಂದೈತಿ ನೋಡು ಅನ್ನೋ  ಇನ್ನೊಂದು ಮಾತೂ ಇರತೈತಿ.

ಈಗ ಜಾತ್ರೆಗೆ ಹೋಗುವುದು ಅಂದರೆ ಹೇಳಿಕೊಂಡವರು ಪಾದಯಾತ್ರೆ ಮೂಲಕ, ಚಕ್ಕಡಿ ಮೇಲೆ , ಟ್ರ್ಯಾಕ್ಟರನಲ್ಲಿ ( ಈಗ ಚಕ್ಕಡಿಗಿಂತ  ಟ್ರ್ಯಾಕ್ಟರಗಳು ಜಾಸ್ತಿ ಅನ್ನಬಹುದು) , ಬಸ್ಸು, ಹತ್ತಿರ ಇರುವವರು ಟೂವ್ಹೀಲರ್‌ ನಲ್ಲಿ , ಕಾರುಗಳೂ ಸಹ ಈಗ ಸಾಮಾನ್ಯವಾಗಿವೆ. ನಾವೂ ಕಾರಲ್ಲಿಯೇ ಹೋಗಿಬಂದೆವೆನ್ನಿ, ಕಾರು ಸುಮಾರು ದೂರದ ವರೆಗೆ ಬೆಟ್ಟದ ಮೇಲೆ ಹೋಗುತ್ತದೆಯಾದ್ದರಿಂದ ನಡೆಯುವುದು ಸ್ವಲ್ಪ ಕಡಿಮೆಯಾಗುತ್ತದೆ. ಹಿಂದೆಲ್ಲಾ ಮೆಟ್ಟಲುಗಳ ಬಳಸಿ ಹತ್ತಿ ಮಲ್ಲಯ್ಯನ ದರ್ಶನ ಮಾಡಿಕೊಂಡು , ಅಲ್ಲಿಂದ ಮೇಲೆ ಇನ್ನೂ ಎತ್ತರವಿರುವ ಬೆಟ್ಟ ಹತ್ತಿ( ಈಗ ಅಲ್ಲೂ ಮೆಟ್ಟಿಲುಗಳನ್ನು ಮಾಡಿದ್ದಾರೆ) ಬೆಟ್ಟದ ಮಲ್ಲಯ್ಯನ  ಕಂಡು ನಮಸ್ಕರಿಸಿ ಬರುವುದಿತ್ತು.  ಬಾಲ್ಯದ ದಿನಗಳು ಯಾವಾಗಲೂ ಮುಖದ ಮೇಲೊಂದು ಮಂದಹಾಸ , ಕೆಲವೊಮ್ಮೆ ನೆನಪುಗಳು ನಗುವನ್ನು ತರುವುದೂ ಐತಿ. ಬಾಲ್ಯವೆಂದರೇ ಅದು ಸುಂದರ ಲೋಕ. ಹೆಚ್ಚೇನು ತಾಂತ್ರತಿಕ ಸೌಲಭ್ಯಗಳಿಲ್ಲದ ಆ ದಿನಗಳ ಸೊಬಗೇ ಬೇರೆ.

ನಮ್ಮವ್ವನ ಮೊದಲ ತೊಗರ್ಸಿ ಜಾತ್ರೆ  ಮದುವೆಯಾದ ಹೊಸತರಲ್ಲಿ, ಆಗ ಅವಳು ಏಳು ತಿಂಗಳ ಬಸುರಿ, ಒಳಗೆ ನಾನು, ನಾನೂ ಅಭಿಮನ್ಯುವಿನ ತರಹ ನಮ್ಮವ್ವನ ಗರ್ಭದಲ್ಲಿ ಬೆಚ್ಚಗೆ ಕುಳಿತು ಜಾತ್ರೆ ನೋಡಿರಬಹುದೇ? . ಇರಲಿ ಆಗ ಜಾತ್ರೆಗೆ ಹೋಗುವುದೆಂದರೆ ಒಂದು ತಿಂಗಳ ಮೊದಲಿನಿಂದಲೇ ತಯಾರಿಯಂತೆ, ಮಸಾಲಿ ಪುಡಿ, ಅಡುಗೆ ಎಣ್ಣೆ, ಖಾರದ ಪುಡಿ, ಅರಿಷಿಣ, ಸಾಸಿವೆ, ಜೀರಿಗೆ , ಗುರಳ್ಳು ಪುಡಿ, ಕುಸಬಿ ( ನೆನೆಸಿ, ಅದರ ಹಾಲು ತಗೆದು ಅನ್ನಕ್ಕೆ ಹಾಕಿ ಅಕ್ಕಿಹುಗ್ಗಿ ಮಾಡುತ್ತಾರೆ, ಅಕ್ಕಿಹುಗ್ಗಿ ಎಲ್ಲ ಅಮವಾಸ್ಯೆ ಮತ್ತು ಹಬ್ಬಗಳಲ್ಲಿ  ಇರಲೇಬೇಕು) ಹಸ ಮಾಡಿದ ಅಕ್ಕಿ ( ಸ್ವಚ್ಛ ಮಾಡಿದ) , ಕಾಯಿಪಲ್ಲೆ, ಮಾಡಿಟ್ಟುಕೊಂಡ ಮಾಲ್ದಿ, ತುಪ್ಪ, ಹೋಳಿಗೆ ಮಾಡಲು ಬೇಕಾಗುವ ಸಾಮಗ್ರಿ, ಅಡಿಗೆಯ ಇನ್ನಿತರ ಎಲ್ಲ ಸಾಮಾನುಗಳು, ಭಾಂಡೆಗಳು. ನಾಲ್ಕು ದಿನಕ್ಕೆ ಆಗುವಷ್ಟು ಉಡುವ ಬಟ್ಟೆ, ಹಾಸಲು, ಹೊದೆಯಲು ಬೇಕಾಗುವವು, ಎತ್ತಿಗೆ ಹುಲ್ಲು, ಒಂದೆ ಎರಡೇ ತಿಂಗಳಾನುಗಟ್ಟಲೆ ಸವರ್ಸೋದ ( ಹೊಂದಿಸಿಕೊಳ್ಳುವುದು) . ಉಪ್ಪು ಮಾತ್ರ  ತೊಗರ್ಸಿಯಲ್ಲಿಯೇ ತೊಗೊಂಡು ಅಲ್ಲೇ ಬಿಟ್ಟು ಬರುವುದಂತೆ.

ಅಂತೂ ಎಲ್ಲಾ ಚಕ್ಕಡಿಗೆ ಹಾಕಿಕೊಂಡು ಮಕ್ಕಳು ಮರಿ , ಹೆಣ್ಣು ಮಕ್ಕಳು , ಮುದುಕರು ಚಕ್ಕಡಿಯಲ್ಲಿ, ಗಂಡಮಕ್ಕಳು  ಸ್ವಲ್ಪ ದೂರ ಕಾಲ್ನಡಿಗೆ ಸ್ವಲ್ಪ ದೂರ ಚಕ್ಕಡಿ, ಹೀಗೆ ಸಂಜೆ 4 ರಿಂದ 5 ಗಂಟೆಗೆ ನಮ್ಮೂರಿನಿಂದ (ಅಕ್ಕಿ ಆಲೂರು) ಹೊರಟರೆ , ರಾತ್ರಿಯೆಲ್ಲಾ ಎತ್ತುಗಳ ಕೊರಳಲ್ಲಿನ ಗಂಟೆನಾದ, ಅವುಗಳ ತಾಳಬದ್ಧವಾದ ಹೆಜ್ಜೆ ಹಾಕುವುಕೆಯ  ಸೊಬಗು, ಹಿಂದೆ ಮುಂದೆ ಎಲ್ಲಾ ಜಾತ್ರೆಗೆ ಹೊರಟವರ ಮಾತುಗಳ ಸಪ್ಪಳ, ಸ್ವಲ್ಪ ತೂಕಡಿಕೆ ಸ್ವಲ್ಪ ಎಚ್ಚರ ಹೀಗೆ ಸಾಗುವಾಗ ಮೊದಲು ಸಿಗುವುದು ಭೂತಪ್ಪನ ಗುಡಿ, ಅಲ್ಲಿ ಸ್ವಲ್ಪ ಹೊತ್ತು ನಿಂತು , ಹಣ್ನೂ ಕಾಯಿ ಮಾಡಿಸಿ, ನಮಿಸಿ ಹೊರಟರೆ ನಿಲ್ಲುವುದು ತತ್ತೂರ ಹೊಂಡದ ಹತ್ತಿರ ಆಗ ಹೆಚ್ಚು ಕಡಿಮೆ ಮರುದಿನ ಮಧ್ಯಾನ್ಹ ವಂತೆ.

ಅಲ್ಲಿ ಎತ್ತಿನ ಕೊರಳು ಬಿಚ್ಚಿ ನೀರು ಕುಡಿಸಿ, ಹುಲ್ಲು ಹಾಕಿ ಅಂತ ಗಂಡಮಕ್ಕಳೆಲ್ಲಾ ಶುರು ಹಚ್ಚಿಕೊಂಡರೆ , ಹೆಣ್ಣು ಮಕ್ಕಳು ತಮ್ಮದು, ಮಕ್ಕಳದು ಜಳಕ, ಅರಿವೆ ಒಗೆಯುವುದು, ಹಿಂದಿನ ದಿನ ವೇ ಮಾಡಿಕೊಂಡು ಬಂದ ಬುತ್ತಿ ರೊಟ್ಟಿ ಎಲ್ಲರಿಗೂ ನೀಡಿ (ಬಡಿಸಿ) ತಾವೂ ಉಂಡು ಮತ್ತೆ ಹೊರಟರೆ 7.30pm ಆಸುಪಾಸು ತೊಗರ್ಸಿ ಮುಟ್ಟುತ್ತಿದ್ದರಂತೆ. ಅಲ್ಲಿ ಒಂದೊಂದು ಕಡೆ ಒಂದೊಂದು ಊರಿನವರು ಉಳಿದುಕೊಳ್ಳುವುದು ಫಿಕ್ಸ್.‌ ನಮ್ಮ ಮನೆಯವರೆಲ್ಲಾ ಉಳಿದುಕೊಳ್ಳುತ್ತಿದ್ದುದು ಒಂದು ಗಿರಣಿಯಲ್ಲಿ. ಗಿರಣಿಯವರೂ ಸಹ ಬರ್ರಿ ಬರ್ರಿ ಅಂತ ಇವರನ್ನ ಸ್ವಾಗತಿಸುವುದು, ಉಭಯ ಕುಶಲೋಪರಿ ನಂತರ ಒಂದೊಂದು ಮನೆಯವರು (ನಮ್ಮ ಕಾಕಾಗಳು) ತಮಗೆಂದೇ ಎಂದೆಂದೂ ರಿಸರ್ವ ಆದ ಜಾಗದಲ್ಲಿ ಬೀಡುಬಿಟ್ಟು ಸಾಮಾನುಗಳನ್ನು ಬಿಚ್ಚಿದರೆ ಜಾತ್ರೆ Officiallಆಗಿ ಶುರು.

ಹೆಣ್ಣು ಮಕ್ಕಳೆಲ್ಲಾ ಸೀರೆ ಬದಲಾಯಿಸುವುದಿದ್ದರೆ ಬದಲಾಯಿಸಿ, ಅಗತ್ಯವಿದ್ದರೆ ಮಕ್ಕಳ ಅರಿವೆ ಬೇರೆ ಹಾಕಿ ಜಾತ್ರೆಯಲ್ಲಿಆಗ ತಾನೆ ಹಚ್ಚುತ್ತಿರುಚ ಅಂಗಡಿಗಳನ್ನು ನೋಡಿಕೊಂಡು , ಓಡಾಡಿ ಬರಲು ಹೊರಟರೆ, ಗಂಡಮಕ್ಕಳಿಗೆಲ್ಲ ( ಎಲ್ಲರೂ ರೈತರೆ) ಎಲೆ (ಇಸ್ಪೀಟು) ಆಟದ ತಯಾರಿ , ನಾಟಕ ನೋಡುವುದು ಇವೆಲ್ಲ ಚಿಂತೆ, ಆಗೆಲ್ಲ ಇಂಥಹವುಗಳೇ ರೈತರು  ನಿರಂತರ ದುಡಿಮೆಯ ನಂತರ ನಿರಾಳತೆಗೆ ಕಂಡುಕೊಳ್ಳುತ್ತಿದ್ದ ಮಾರ್ಗಗಳು. ಒಂದೆರಡು ದಿನಗಳು ಯಾರಿಗೂ ನೋವುಂಟಾಗದ ಹಾಗೆ ಉಲ್ಲಸಿತರಾಗಿ ಮುಂದಿನ ದುಡಿಮೆಗೆ ತಯಾರಾಗಲು ಇದೊಂದು ಅವಕಾಶ. ರಾತ್ರಿ ಊಟದ ಚಿಂತೆಯಿಲ್ಲ ತಂದ ಬುತ್ತಿ ಅಷ್ಟು ಇರುತ್ತಿತ್ತಂತೆ.

ರಾತ್ರಿ ಎಲ್ಲ ಹೀಗೆ ಬ್ಯೂಸಿ ಆದರೆ, ಬೆಳಿಗ್ಗೆ ಲಗೂನ ಎದ್ದು ತೇರು ನೋಡುವ ಕೌತುಕದಲ್ಲಿ ಉಂಡು ಕೆಲವರು ಮಲಗುವುದೂ ಇತ್ತಂತೆ. ಅದರಲ್ಲಿ ನವ್ವನೂ ಒಬ್ಬಳು. ಬೆಳಗು ಮುಂಜಾನೆ ಸಪ್ಪಳ ಕೇಳಿ ಲಗುಬಗೆಯಿಂದ ಹೊಟ್ಟೆ ಹೊತ್ತುಕೊಂಡು ಸ್ವಲ್ಪ ಜೋರಾಗಿಯೇ ಹೆಜ್ಜೆ ಹಾಕಿ ಸಣ್ಣ ತೇರೆಳೆಯುವುದನ್ನು  ನೋಡಿ ಕೈಮುಗಿದು ಬಂದಳಂತೆ. ನಿಮ್ಮ ನೆನೆಪು ಹೇಳಿ ಅಂತ ನಮ್ಮಪ್ಪನ್ನ ಕೇಳಿದರೆ ಇರುವ ನಾಲ್ಕು ಹಲ್ಲು ಕಾಣಿಸುವಂತೆ ಜೋರಾಗಿ ನಕ್ಕು ನಮ್ಮ ಜಾತ್ರೆಯೇ ಬೇರೆ ಬಿಡು, ನಾಟಕ , ಎಲೆಯಾಟದಿಂದ ನಮಗೆಲ್ಲಿ ಪುರುಸೊತ್ತಿತ್ತು ಅಂತಾರೆ.

ಉಳಿದವರೆಲ್ಲ ಒಬ್ಬೊಬ್ಬರಾಗಿ ಏಳುತ್ತ, ಜಳಕ , ತಿಂಡಿ ತಯಾರಿ , ಜೊತೆಗೆ ಕರ್ಚಿಕಾಯಿ, ಚಕ್ಕಲಿ, ಲಡಕಿ (ಖೊಬ್ರಿ ಕಡ್ಡಿ) , ಒಣಗಿಸಿ ಹಚ್ಚಿದ ಅವಲಕ್ಕಿ, ಬೆಳ್ಳೊಳ್ಳಿ ಮಂಡಕ್ಕಿ, ರವಾ ಉಂಡಿ , ಬೇಸನ ಉಂಡಿ(ಲಾಡು) ಇವೆಲ್ಲಾ ಅಂತು ಇರತಿದ್ವು, ಮಕ್ಕಳ ತಿನ್ನುವಿಕೆ ಸಾಗಿರುತ್ತಲೇ ಇರುತ್ತಿತ್ತಂತೆ.  ಉಂಡಿ ವಿಷಯಕ್ಕೆ ಬಂದರೆ ರವಾ ಉಂಡಿ ಮತ್ತು ಬೇಸನ ಉಂಡಿ ಮಾತ್ರ ಯಾವಾಗ ಬೇಕಾದರು ಮಾಡುತ್ತಾರೆ, ಆದರೆ ಉಳಿದ ಉಂಡಿಗಳಾದ ಶೇಂಗಾ ಉಂಡಿ, ಎಳ್ಳುಂಡಿ, ಗುಳ್ಳಡಕಿ ಉಂಡಿ, ತಂಬಿಟ್ಟಿನ ಉಂಡಿ, ಕಡ್ಲಿ ಉಂಡಿ, ಶೇವು ಉಂಡಿ, ಗುಳಗಿ ಉಂಡಿ, ಮಂಡಕ್ಕಿ ಉಂಡಿ ಇವೆಲ್ಲಾ ನಾಗರ ಪಂಚಮಿಯ ವಿಷೇಶಗಳು.

ತಿಂಡಿ ಕಾರ್ಯಕ್ರಮ ಮುಗಿದರೆ ಜಳಕ ಮಾಡಿ ಮಲ್ಲಯ್ಯನ ಎಡಿಗೆ ತಯಾರಿ, ಹೂರಣದ ಹೋಳಿಗೆ (ಕಡ್ಲೆಬೇಳೆ ಹೂರಣ) , ಅಕ್ಕಿಹುಗ್ಗಿ, ಬದ್ನಿಕಾಯಿ ಪಲ್ಯೆ, ಸೌತಿಕಾಯಿ ನೆನಸಿದ ಹೆಸರಬ್ಯಾಳಿ ಉಳ್ಳಾಗಡ್ಡಿಯ ಪಚಡಿ, ಕಡ್ಲಿಕಾಳು ಅಥವಾ ಮಡಕಿಕಾಳು ಪಲ್ಯೆ, ಅನ್ನ , ಮೊಸರು, ಮುಖ್ಯವಾಗಿ ಮಾಲ್ದಿ ತುಪ್ಪ . ದುಂಡಿಕಲ್ಲಿನ್ಯಾಗ ಹೂರಣ ಮತ್ತು ಮಸಾಲಿರುಬ್ಬಿ ಹೂರಣಕ್ಕಾಗಿ ಬೇಯಿಸಿದ ಕಡ್ಲಿಬ್ಯಾಳಿ ಕಟ್ಟಿನ ಸಾರು , ಗುರಳ್ಳು ಪುಡಿ ಹಾಕಿ ಪಲ್ಲೆ ಎಲ್ಲ ಕಡೆ ಘಮಘಮ.

ತಾಟಿನಲ್ಲಿ ಬಾಳೆಎಲೆ ಮೇಲೆ ಎಲ್ಲ ಬಡಿಸಿಕೊಂಡು ಹೆಣ್ಣಮಕ್ಕಳು, ಮಕ್ಕಳು ಹೊಸ ಹೊಸ ಸೀರೆ , ಅಂಗಿ ಹಾಕಿಕೊಂಡು ಕಾಯಿ ಹಣ್ಣು ಸಮೇತ ಮಲ್ಲಯ್ಯನ ಕಂಡು , ಕಾಯಿ ಒಡೆಸಿಕೊಂಡು, ಎಡಿ ಹಿಡದು, ಎದುರಿಗೆ ಸಿಕ್ಕವರನ್ನು , ಆರಾಮ, ಈಗ ಬಂದ್ರ್ಯಾ, ನಿನ್ನೆನ ಬಂದೀರಾ ಎಲ್ಲಿ ಉಳಕೊಂಡೀರಿ, ಹೊಸಾ ಸೊಸಿ ಏನಂತಾಳ, ಮಗನಿಗೆ ಕನ್ಯಾ ನೋಡಬೇಕು, ನಮ್ಮ ಹುಡುಗಿಗೆ ಯ್ಯಾರಾದರು ಗಂಡಿದ್ರೆ ಹೇಳ್ರಿ, ಮೊಮ್ಮಗ/ಳು ಹುಟ್ಯಾನ/ಳಂತ…., ಹೊಲದಾಗ ಏನೇನ ಹಾಕೀರಿ ಇತ್ಯಾದಿ ಇತ್ಯಾದಿ ಮಾತುಕತೆ ಯಾಡುತ್ತ , ಏನೇನು ಅಂಗಡಿ ಹಾಕ್ಯಾರ , ಏನೇನ ಖರೀದಿ ಮಾಡಬೇಕು ಅಂತೆಲ್ಲ ಲೆಕ್ಕಾಚಾರ ಹಾಕ್ಕೋತ ಬರೋದ್ರಾಗ ಊಟದ ಹೊತ್ತು.

ಗಡದ್ದಾಗಿ ಉಂಡು ಸ್ವಲ್ಪ ಅಡ್ಡಾಗಿ (ಸ್ವಲ್ಪ ಮಲಗಿ) ಎದ್ದು ಜಾತ್ರೆಯಲ್ಲಿ ಅಡ್ಡಾಡಿ ಬಳೆ ಅಂತೂ ತೊಗೋಳ್ಳೋದ, ನಂತರ ಉಳಿದ ಖರೀದಿ, ಭಾಂಡೆ ತೊಗೋಳ್ಳಾಕೂ ಇದ ಸಮಯ, ನಾಟಕ ನೋಡೂದು , ಹಿಂಗ ಆರಾಮಾಗಿ ಸಿಗೋದ ಅಪರೂಪ ಹಂಗಾಗಿ ಹಿಂದಿನ ಮುಂದಿನ ಎಲ್ಲ ಮಾತುಕತೆ ಈಗಲೇ.

ಮಾರನೇ ದಿನ ದೊಡ್ಡ ತೇರು ಎಳೆದಾದ ಮೇಲೆ  ನೋಡಿ ಕೈಮುಗಿದು, ತೇರಿಗೆ ಹಣ್ಣುಕಾಯಿ ಮಾಡಿಸಿ , ಊರಿಗೆ ಹೋದ ಮ್ಯಾಲೆ ಬೇರೆಯವರಿಗೆ ಕೊಡಲು, ಮಂಡಕ್ಕಿ, ಖಾರದಾಣಿ, ಬೆಂಡು , ಬತ್ತಾಸ , ಯ್ಯಾರಾದ್ರು ಕಾಯಿಕೊಟ್ಟು ಕಳಿಸಿದ್ರ ಅದನ್ನೂ ಒಡೆಸಿಕೊಂಡು , ಹೊರಡುವ ತಯಾರಿ. ರಾತ್ರಿ ತೊಗರ್ಸಿಯಿಂದ ಹೊರಟರೆ ಬೆಳಿಗ್ಗೆ 9-10 ಗಂಟೆ ಹೊತ್ತಿಗೆ ಗೊಂದಿ ಹೊಳೆಗೆ ಬಂದು ಮುಟ್ಟುತ್ತಿದ್ದರಂತೆ . ಅಲ್ಲಿ ಎತ್ತಿನ ಕೊರಳು ಬಿಚ್ಚಿ ನೀರು ಕುಡಿಸಿ ಹುಲ್ಲು ಹಾಕಿ ,ಜಳಕಾ ಮಾಡಿ ಸಜ್ಜಕದ ಹೋಳಿಗೆ ಮಾಡುವುದು ಒಬ್ಬಿಬ್ಬರ  ಕೆಲಸವಾದರೆ ಉಳಿದ ಅಡಿಗೆ ಮಾಡುವುದು , ಅರಿವೆಗಳನ್ನೆಲ್ಲಾ (ಹಾಸುವುದು , ಹೊದೆಯುವುದುದರಿಂದ ಹಿಡಿದು ಎಲ್ಲ ) ಒಗೆದು ಒಣಗಿಸಿಕೊಳ್ಳುವುದು ಉಳಿದವರ ಕೆಲಸ. ಹರಿಯೋ ಹೊಳಿ ಕಂಡ ಮ್ಯಾಲೆ ಅರಿವಿ ಎಲ್ಲಾ ಒಕ್ಕೋಳ್ದೇ ಇದ್ರ ಹೆಂಗ , ಹರಿಯ ನೀರಾಗ ಅರಿವಿ ಸ್ವಚ್ಛ ಆಕ್ಕಾವು. ಇವು ನಮ್ಮವ್ವಷ್ಟ ಅಲ್ಲಾ ನಮ್ಮ ಅಮ್ಮ (ಅಜ್ಜಿ, ನಮ್ಮ ಅಪ್ಪನ ತಾಯಿ) , ನಮ್ಮ ಕಕ್ಕಿ(ಕಾಕಾನ ಪತ್ನಿ) , ಅತ್ತಿ (ಸೊದ್ರತ್ತಿ ) ಎಲ್ಲಾರ ಒಮ್ಮತದ ಅಭಿಪ್ರಾಯ. ಹೊಳ್ಳಿ ಬರೋಮುಂದ ಹೋಳಿಗಿ ಸಮೇತ ಹಬ್ಬದ ಅಡಿಗಿ ಯ್ಯಾಕ ಅಂತ ಕೇಳಿದ್ರ ಅದಕ್ಕೊಂದು ನಮ್ಮವ್ವ ಸುಂದರ , ಮುಗ್ಧ, ಭಕ್ತಿಯಿಂದ ಕೂಡಿದ ವಿವರಣೆ ಕೊಡ್ತಾಳ.

ಆ ವಿಚಾರ ಏನು ಅಂದ್ರ ಇವರುಗಳೆಲ್ಲಾ ಮಲ್ಲಯ್ಯನ ಭಕ್ತರು  ತಿಂಗಳಾನಗಟ್ಲೆ ತಯಾರಿಮಾಡಿಕೊಂಡು , ಅಲ್ಲಿ ಎರಡು ದಿನಾ ಇದ್ದು ಮಲ್ಲಯನಿಗೆ ರುಚಿರುಚಿಯಾಗಿ ಅಡಿಗೆ ಮಾಡಿ ಪೂಜೆ ಮಾಡಿ, ಎಡಿ ಹಿಡದು ಎಲ್ಲ ಮಾಡಿರ್ತಾರಲ್ಲ  ಈ ಭಕ್ತರ ಮೇಲಿನ ಪ್ರೀತಿಯಿಂದ ಮಲ್ಲಯ್ಯ  ಇವರ ಜೊತೆಗೆ ಬಂದುಬಿಡ್ತಾನಂತ. ಹಂಗಂತ ಮಲ್ಲಯ್ಯನ್ನ ನಮ್ಮೂರಿಗೆ ಕರ್ಕೊಂಡು ಬರಾಕಾಕ್ಕತ , ತೊಗರ್ಸಿಗೆ ಬರುವ ಅವನ ಇನ್ನುಳಿದ ಭಕ್ತರ ಕಥೆಯೇನು? ಅದಕ್ಕ ಗೊಂದಿ ಹೊಳೆಯಲ್ಲಿ ಜಳಕ ಮಾಡಿ ಅಡಿಗಿ ಮಾಡಿ, ಹೊಳಿ ಮಲ್ಲಯ್ಯನ್ನ (ಹೊಳೆ ದಂಡೆಯಲ್ಲಿರುವ ಮಳಲಿನಿಂದ (ಉಸುಕು/ರೇತಿ/ಮರಳು)ಮಲ್ಲಯ್ಯನ್ನ (ಲಿಂಗದಾಕಾರ) ಮಾಡಿ ಪೂಜೆ ಮಾಡಿ, ಎಡಿ ಹಿಡಿದು , ನಮಸ್ಕರಿಸಿ, ಮರಳಿ ಹೋಗಲು ವಿನಂತಿಸಿಕೊಂಡು , ಮುಂದಿನ ವರುಷ ಜಾತ್ರೆಗೆ ಬರುವ ಮಾತು ಕೊಟ್ಟು , ಮಳಲ ಮಲ್ಲಯ್ಯನ್ನ ಹೊಳೆಯೊಳಗ ಬಿಟ್ಟು , ಎಲ್ಲ ಸಾಮಾನುಗಳನ್ನ ಚಕ್ಕಡಿಗೆ ಹಾಕಿಕೊಂಡು ಹೊರಟರೆ ನಮ್ಮೂರಿಗೆ ಬರುವುದು ರಾತ್ರಿಯಾಗುತ್ತಿಂತ್ತಂತೆ.

 ವರುಷಕ್ಕಾಗುವಷ್ಟು ಜಾತ್ರೆಯ ನೆನಪುಗಳನ್ನು ಹೊತ್ತುಕೊಂಡು , ಒಡಲೊಳಗೆ ನನ್ನ ಹೊತ್ತುಕೊಂಡು ನಮ್ಮವ್ವ ಮಲ್ಲಯ್ಯಾ ನೀನ ಕಾಯಪಾ ಅಂದುಕೊಂಡಳಂತೆ. ಜಾತ್ರೆ ಬಂದಾಗಲೊಮ್ಮೆ ಈ ಎಲ್ಲ ವಿಷಯಗಳನ್ನು ಹೊಸದಾಗೆಂಬಂತೆ ಅವಳು ಹೇಳಳುವುದು ನಾನು ಕೇಳುವುದು ಇದ್ದೇ ಇದೆ. ಅದೊಂದು ಸುಮಧುರ ಅನುಭವ. ಅಂತಹ ಒಂದು ತೊಗರ್ಸಿ ಮಲ್ಲಯ್ಯನ ಜಾತ್ರೆಗೆ ಮನೆಯೆವರೊಡನೆ, ಅಪ್ಪಾ ಅವ್ವನ್ನ ಕರೆದುಕೊಂಡು ಹೋಗಿ ಬಂದದ್ದು ಈ ವರುಷದ ಮುಖ್ಯಾಂಶ .