ಇರುವೆಯೂ ಹಕ್ಕಿಪುಕ್ಕವೂ

Thumbnail

ಇರುವೆಯೂ ಹಕ್ಕಿಪುಕ್ಕವೂ

ಗ್ಲ್ಯಾಡಿಸ್ ಕ್ವಾಡ್ರಸ್ ಪೆರ್ಮುದೆ

 

ಕಥೆಗಳೆಂದರೆ ಎಲ್ಲರಿಗೂ ತುಂಬಾ ಖುಶಿ ಅದೇ ರೀತಿ ಖುಶಿ ಕೊಡುವ ಹಳೆ ಕಥೆ ಇದು. ಒಂದು ಕಾಡಿನ ಮೂಲೆಯಲ್ಲಿದ್ದ ಮರದ ಅಡಿಯಲ್ಲಿ ಸಾವಿರಾರು ಇರುವೆಗಳು ವಾಸಿಸಿದ್ದವು. ಒಂದು ದಿನ ಆ ಗೂಡಿನಲ್ಲಿದ್ದ ಒಂದು ಇರುವೆ ಆಹಾರ ಸಂಗ್ರಹಿಸಲೆಂದು ಹೊರಗೆ ಬಂದು ಕಾಡಿನಲ್ಲಿ ಸುತ್ತಾಡುತ್ತಿತ್ತು. ಆ ಹೊತ್ತಿಗೆ ಅದಕ್ಕೆ ಸುಂದರವಾದ ಹಕ್ಕಿಯ ದೊಡ್ಡದಾದ ಪುಕ್ಕವೊಂದು ಕಂಡಿತು. ಇರುವೆ ಆ ಪುಕ್ಕದ ಸೊಬಗಿಗೆ ಮನಸೋತು ಅದು ತನಗೆ ಬೇಕೆಂದು ಆ ಪುಕ್ಕವನ್ನು ಎಳೆದುಕೊಂಡು ತನ್ನ ಗೂಡಿನತ್ತ ಕೊಂಡೊಯ್ಯತೊಡಗಿತು.

ನಿಜವಾಗಿ ಆ ಪುಕ್ಕ ಇರುವೆಗಿಂತ ತುಂಬಾ ದೊಡ್ಡದಾಗಿತ್ತು. ಗೂಡಿನತ್ತ ಒಯ್ಯುವಾಗ ಕೆಲವೊಮ್ಮೆ ಕಲ್ಲಿನಡಿ ಅದು ಸಿಲುಕಿತು, ಕೆಲವೊಮ್ಮೆ ಮರದ ಬೊಡ್ಡೆ, ಬೇರುಗಳ ನಡುವೆ ಸಿಕ್ಕಿಕೊಂಡಿತ್ತು. ಇರುವೆಗೆ ಆ ಪುಕ್ಕವನ್ನು ಎಳೆದೊಯ್ಯಲು ತುಂಬಾ ಕಷ್ಟವಾಗುತ್ತಿತ್ತು. ಆದರೂ ಹಠ ಬಿಡದೆ ಇರುವೆ ಆ ಪುಕ್ಕವನ್ನು ಎಳೆದುಕೊಂಡು ಹೋಗುತ್ತಿತ್ತು. ನಿಜವಾಗಿ ಇರುವೆಗೆ ಅನಗತ್ಯವಾದ ಉಪದ್ರಗಳನ್ನು ಅನುಭವಿಸುವ ಅನಿವಾರ್ಯತೆ ಆ ಪುಕ್ಕದಿಂದ ಉಂಟಾಯ್ತು, ಆದರೂ ತುಂಬಾ ಕಷ್ಟಪಟ್ಟು, ತನ್ನ ಎಲ್ಲಾ ಶಕ್ತಿ ಹಾಕಿ ಇರುವೆ ಆ ಪುಕ್ಕವನ್ನು ಎಳೆದೊಯ್ಯುತ್ತಿತ್ತು. ಆ ಪುಕ್ಕವನ್ನು ತನ್ನ ಗೂಡಿನ ಒಳಗಿಟ್ಟು ಅದರ ಮೇಲೆ ತಾನು ಸುಖವಾಗಿ ಮಲಗುವೆ ಎಂದು ಅದು ಕನಸು ಕಾಣುತ್ತಿತ್ತು.

ಅಂತೂಇಂತೂ ಆ ಪುಕ್ಕದೊಂದಿಗೆ ಇರುವೆ ತನ್ನ ಗೂಡಿನ ಬಳಿ ತಲುಪಿತು. ಆಗ ನಿಜವಾದ ಸಮಸ್ಯೆ ಎದುರಾಯ್ತು. ಆ ಪುಕ್ಕ ಇರುವೆಯ ಗೂಡಿಗಿಂತ ತುಂಬಾ ದೊಡ್ಡದು. ಈಗ ಪುಕ್ಕವನ್ನು ಸಲೀಸಾಗಿ ಗೂಡಿನ ಒಳಗೆ ಕೊಂಡೊಯ್ಯುವಂತಿಲ್ಲ ಮಾತ್ರವಲ್ಲ ಒಂದು ವೇಳೆ ಬಲ ಹಾಕಿ ಪುಕ್ಕವನ್ನು ಗೂಡಿನೊಳಗೆ ಎಳೆದರೆ ಇಡೀ ಗೂಡು ಕುಸಿದುಬೀಳುವ ಅಪಾಯವಿತ್ತು. ತುಂಬಾ ಹೊತ್ತು ಬೇರೆ ಬೇರೆ ಉಪಾಯದಿಂದ ಪುಕ್ಕವನ್ನು ಗೂಡಿನೊಳಗೆ ಎಳೆಯುವ ಆಲೋಚನೆಗಳನ್ನು ಆ ಇರುವೆ ಮಾಡಿತು.

ಕೊನೆಗೆ ಬೇರೆ ದಾರಿಕಾಣದೆ ಇರುವೆ ಆ ಪುಕ್ಕವನ್ನು ಅಲ್ಲಿಯೇ ಗೂಡಿನೊಳಗೆ ಬಿಡಬೇಕಾಯ್ತು. ಗಾಳಿ, ಮಳೆ, ಬಿಸಿಲಿಗೆ ಬಿದ್ದು ಆ ಪುಕ್ಕ ಹಾಳಾಗಿ ಹೋಯ್ತು. ಇರುವೆಯ ಅಪಾರ ಶ್ರಮ ಕೂಡಾ ಅನಗತ್ಯವಾಗಿ ಹಾಳಾಯ್ತು.

ನಮ್ಮ ಬದುಕಿನಲ್ಲಿಯೂ ಈ ರೀತಿಯ ಪರಿಸ್ಥಿತಿ ಉಂಟಾಗುತ್ತದೆಯೇ? ಎಲ್ಲಾ ವಿಷಯಗಳು ಉತ್ತಮ ಹಾಗೂ ಮಹತ್ವದ ವಿಷಯಗಳಾಗಿವೆ. ಆದರೆ ಎಲ್ಲವನ್ನೂ ನಮ್ಮ ಬದುಕಿನಲ್ಲಿ ಸ್ವೀಕರಿಸಬೇಕೆ? ನಮ್ಮ ಪರಿಶ್ರಮದ ಆದಯತೆಗಳು ಯಾವುವು ಎನ್ನುವುದನ್ನು ಮೊದಲೇ ಸ್ಪಷ್ಟವಾಗಿ ತಿಳಿದುಕೊಂಡು ಆ ಪ್ರಕಾರ ಪರಿಶ್ರಮಿಸಿ ಯಶಸ್ವಿಯಾಗುವುದು ಉತ್ತಮವಲ್ಲವೇ?

*******