ಸುಂದರನೆಂಬ ಸೈನಿಕನ ಕುದುರೆಯ ಕಥೆ

Thumbnail

ಸುಂದರನೆಂಬ ಸೈನಿಕನ ಕುದುರೆಯ ಕಥೆ

ಉತ್ತರದ ಕೋಸಲವೆಂಬ ರಾಜ್ಯದಲ್ಲಿ ಬೃಹದ್ರಥನೆಂಬ ಅರಸನು ಆಡಳಿತ ನಡೆಸುತ್ತಿರುವಾಗ ಆತನ ಸೈನ್ಯದಲ್ಲಿ ಸುಂದರನೆಂಬ ಸೈನಿಕನಿದ್ದನು. ಅರಸನು ತನ್ನ ಸೈನ್ಯದ ಎಲ್ಲಾ ಸೈನಿಕರಿಗೆ ಯುದ್ಧಕ್ಕೆ ಬೇಕಾದ ಉತ್ತಮ ತಳಿಯ ಕುದುರೆಯನ್ನು ಮೊದಲೇ ತರಬೇತಿಗಾಗಿ ಸೈನಿಕರ ಕೈಗೆ ಒಪ್ಪಿಸುವ ಪದ್ಧತಿ ರಾಜ್ಯದಲ್ಲಿ ಚಾಲ್ತಿಯಲ್ಲಿತ್ತು. ಅದೇ ರೀತಿ ಅರಸನು ಉತ್ತಮ ಜಾತಿಯ ಕುದುರೆಯೊಂದನ್ನು ಸುಂದರನೆಂಬ ಸೈನಿಕನಿಗೂ ನೀಡಿದ್ದನು. ನಿಜವಾಗಿ ಸುಂದರನು ಅಷ್ಟೊಂದು ಬುದ್ದಿವಂತನಲ್ಲದಿದ್ದರೂ ಅರಸನಿಗೆ ಅವನ ಮೇಲೆ ಪ್ರೀತಿಯಿದ್ದ ಕಾರಣ ಅವನು ಸೈನ್ಯದಲ್ಲಿ ಅವಕಾಶ ಹಾಗೂ ಹೆಚ್ಚಿನ ಅನುಕೂಲಗಳನ್ನು ಪಡೆದಿದ್ದನು.

ಸುಂದರನಿಗೆ ಅವನ ಕುದುರೆಯ ಮೇಲೆ ಅಭಿಮಾನವಿತ್ತು ಹಾಗೂ ಅದನ್ನು ಯುದ್ಧದಲ್ಲಿ ಮಾತ್ರ ಬಳಸುತ್ತಿದ್ದನು. ಆದರೆ ಒಂದು ಶುಭದಿನ ಅರಸ ಬೃಹದ್ರಥನಿಗೂ ಸುತ್ತುಮುತ್ತಲಿನ ಹದಿನಾರು ರಾಜ್ಯಗಳ ಅರಸರಿಗೂ ಶಾಂತಿ ಒಪ್ಪಂದ ನೆರವೇರಿತು. ಇದರ ಪರಿಣಾಮವಾಗಿ ಮುಂದೆ ಯುದ್ಧಗಳೇ ಇಲ್ಲದ ಪರಿಸ್ಥಿತಿ ಉಂಟಾಯ್ತು. ಶಾಂತಿಯ ವಾತಾವರಣ ಬೆಳೆದು ಬಂದಂತೆ ಸುಂದರನಲ್ಲಿ ತನ್ನ ಸೈನಿಕ ಹುದ್ದೆಯ ಕುರಿತು ಅದರ ಅಗತ್ಯಗಳ ಕುರಿತು ಕ್ರಮೇಣ ನಿರ್ಲಕ್ಷ್ಯ ಬೆಳೆದುಬಂತು. ತಾನು ಹೆಚ್ಚಿನ ಲಾಭಕ್ಕಾಗಿ ಬೇರೆ ಬೇರೆ ಕೆಲಸಗಳನ್ನು ಮಾಡತೊಡಗಿದನು. ಶಸ್ತ್ರಾಸ್ತ ತರಬೇತಿ, ಅಂಗಸೌಷ್ಟವ ಮುಂತಾದ ವಿಷಯಗಳತ್ತ ದಿವ್ಯ ನಿರ್ಲಕ್ಷ್ಯ ತಾಳಿದನು.

ಒಂದು ದಿನ ಅವನಿಗೆ ಹೊರೆ ಸಾಗಿಸುವ ಕೆಲಸ ಸಿಕ್ಕಿತು. ಕೆಲಸದಲ್ಲಿ ಅಧಿಕ ಕೂಲಿ ಲಭಿಸಿದ್ದು ಅವನಿಗೆ ತುಂಬಾ ಆಕರ್ಷಕ ಅನಿಸಿತು. ಅದಕ್ಕಾಗಿ ಕೂಲಿ ಹೊರೆಗಳನ್ನು ಸಾಗಿಸಲು ಅವನಿಗೆ ಒಂದು ಕತ್ತೆಯ ಅಗತ್ಯವಿತ್ತು. ಅವನ ಬಳಿ ಕತ್ತೆ ಇರಲಿಲ್ಲವಾದುದರಿಂದ ಅವನಿಗೆ ಮನೆಯಲ್ಲಿದ್ದ ಕುದುರೆಯತ್ತ ಗಮನ ಹೋಯ್ತು. ಹೇಗೂ ಯುದ್ಧಗಳಿಲ್ಲ, ಅನಾವಶ್ಯಕವಾಗಿ ಹೊಸ ಕತ್ತೆಯೊಂದನ್ನು ತರುವ ರಗಳೆ ಯಾಕೆ, ಇದ್ದ ಕುದುರೆಯ ಮೇಲೆಯೇ ಹೊರೆ ಮೂಟೆಗಳನ್ನು ಸಾಗಿಸಿದರಾಯ್ತು ಎಂದು ಅದನ್ನೇ ಆತನು ಬಳಸತೊಡಗಿದನು.

ಆತನಾದರೂ ಹೊರೆ ಸಾಗಿಸುವ ಕೆಲಸದಿಂದ ದುಡ್ಡು ಸಂಪಾದನೆ ಮಾಡುತ್ತಿದ್ದ ಆದರೆ ಆತನ ಕುದುರೆಗೆ ಇದು ಅವಮಾನಕಾರಿಯೂ ಸಹಿಸಲು ಅಸಾಧ್ಯವಾದುದೂ ಆಯ್ತು. ಅದು ಒಮ್ಮೆ ಬಾಯಿಬಿಟ್ಟು, ಎಲೈ ಸುಂದರ, ನಾನು ಯುದ್ಧದಲ್ಲಿ ಹೋರಾಟಗಾರನನ್ನು ಹೊತ್ತೊಯ್ಯಲು ಇರುವವನು, ನನಗೆ ರೀತಿಯ ಕಾಟ ಯಾಕೆ ಕೊಡುತ್ತೀಯಾ, ಹೊರೆಗಳನ್ನು ಹೊರುತ್ತಾ ಮುಂದೆ ನನಗೆ ಯುದ್ಧದಲ್ಲಿ ಮಾಡಬೇಕಾದ ಕೆಲಸಗಳೇ ಮರೆತು ಹೋಗಬಹುದು, ಇದರಿಂದ ಮುಂದೆ ನಿನಗೆ ಖಂಡಿತ ತೊಂದರೆ ಎಂದು ಹೇಳಿ ಬಿಟ್ಟಿತು. ಕುದುರೆಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಸುಂದರ ಕುದುರೆಯನ್ನು ಬೇಕಾಬಿಟ್ಟಿ ದುಡಿಸತೊಡಗಿದನು. ಯಾರಾದರೂ ಕತ್ತೆಯ ಬೆನ್ನಿನ ಮೇಲೆ ಹೊರೆ ಹೊರಲು ಕೊಡುತ್ತಾರೆ, ಸುಂದರನೋ ದುರಾಸೆಗೆ ಬಲಿಯಾಗಿ ಹಾಗೂ ತನ್ನ ಕೆಲಸ ಸುಲಭವಾದರೆ ಸಾಕೆಂಬ ಚಿಂತನೆಗೆ ಒಳಗಾಗಿ ಕುದುರೆಯನ್ನೇ ಹೊರೆ ಹೊರುವ ಕೆಲಸಕ್ಕೆ ಹಚ್ಚಿದನು. ಕುದುರೆಯಾದರೂ ಅಭ್ಯಾಸಬಲಕ್ಕೆ ಒಳಗಾಗಿ ಕ್ರಮೇಣ ಹೊರೆಗಳನ್ನು ಹೊರುವ ಕತ್ತೆಯ ಬುದ್ದಿಯನ್ನೇ ಬೆಳೆಸಿಕೊಂಡಿತು. ಕ್ರಮೇಣ ಕುದುರೆ ಉತ್ತಮ ಆಹಾರವಿಲ್ಲದೆ ಮತ್ತು ಮುಖ್ಯವಾಗಿ ಅನಗತ್ಯ ಹೊರೆ ಹೊರುವ ಕೆಲಸಕ್ಕೆ ಬಿದ್ದು ಬಿಳುಚಿ ಹೋಯ್ತು. ಅದರ ಶಕ್ತಿ ಎಲ್ಲಾ ಹೊರಟು ಹೋಯ್ತು.

ದುರಾದೃಷ್ಟಕ್ಕೆ ಕಾಶಿ ರಾಜ ಮಹಾರಥನಿಗೂ ಕೋಸಲದ ಬೃಹದ್ರಥನಿಗೂ ಯುದ್ಧ ನಡೆಯುವ ಅನಿವಾರ್ಯ ಸಂದರ್ಭ ಸೃಷ್ಟಿಯಾಯ್ತುಅರಸನು ಯುದ್ಧ ಸನ್ನದ್ಧನಾಗಿ ತನ್ನ ಸೈನಿಕರೆಲ್ಲ ತಮ್ಮ ತಮ್ಮ ಕುದುರೆಗಳೊಂದಿಗೆ ರಣರಂಗದತ್ತ ಮುಖ ಮಾಡಲು ಕರೆಕೊಟ್ಟನು. ಎಲ್ಲಾ ಸೈನಿಕರು ತಮಗೆ ಅರಸನು ನೀಡಿದ್ದ ಕುದುರೆಗಳೊಂದಿಗೆ ಯುದ್ಧದ ಸಿದ್ಧತೆಗೆ ತೊಡಗಿದರು. ದುರಾದೃಷ್ಟಕ್ಕೆ ಯಾವುದೇ ತರಬೇತಿಯಿಲ್ಲದೆ ಅಂಗಸೌಷ್ಟವ ಕಳೆದುಕೊಂಡು ಸುಂದರ ಮೈಜಡನಾಗಿದ್ದನು. ಆತ ಮಾತ್ರವಲ್ಲ ಆತನಿಂದ ನಿರಂತರ ಶೋಷಣೆಗೆ ಒಳಗಾಗಿದ್ದ ಆತನ ಕುದುರೆ ಕೂಡಾ ಕತ್ತೆಯಂತೆ ಯುದ್ಧಕ್ಕೆ ಯಾವುದೇ ಉಪಯೋಗವಿಲ್ಲದಂತಾಗಿತ್ತು.

ಸುಂದರ ಈಗ ತನ್ನ ಕುದುರೆಯನ್ನು ಉತ್ತೇಜಿಸಿ ಯುದ್ಧಕ್ಕೆ ಸಿದ್ದವಾಗುವಂತೆ ಒತ್ತಾಯಿಸತೊಡಗಿದನು. ಎದ್ದೇಳು ಕುದುರೆಯೇ, ಬೇಗ ಎದ್ದೇಳು, ರಾಜ ನಮ್ಮನ್ನು ಯುದ್ಧಕ್ಕೆ ಕರೆಯುತ್ತಿದ್ದಾನೆ, ಬಾ ನಾವು ರಣಾಂಗಣದಲ್ಲಿ ಶೌರ್ಯ ಪ್ರದರ್ಶನ ಮಾಡುವ ಎನ್ನುವ ಆತನ ಕರೆಯನ್ನು ಕೇಳಿ ಕುದುರೆ ಕೋಪದಿಂದ, ಎಲೈ ಮೂರ್ಖನೇ ದಿನ ನಾನು ಎಷ್ಟು ಹೇಳಿದರೂ ಕೇಳದೆ ನನ್ನ ಬೆನ್ನ ಮೇಲೆ ಮೂಟೆಗಳನ್ನು ಹೊರೆಸಿದೆ, ಕುದುರೆಯಾಗಿದ್ದ ನನ್ನನ್ನು ಕತ್ತೆಯಂತಾಗಿಸಿದವನು ನೀನು, ಈಗ ನಾನು ಯಾವ ರೀತಿಯಲ್ಲಿಯೂ ನಿನಗೆ ಅನುಕೂಲ ಮಾಡಲಾರೆ ಎಂದು ನೇರವಾಗಿ ಹೇಳಿತು. ಸುಂದರ ಈಗ ಇಂಗು ತಿಂದ ಮಂಗನಂತಾದನು.

  ಹಲವಾರು ಬಾರಿ ನಮ್ಮ ಬದುಕಿನಲ್ಲಿಯೂ ಹೀಗೆಯೇ ಆಗಬಹುದಾಗಿದೆ. ನಮ್ಮ ಮೂಲ ಪ್ರತಿಭೆಗಳನ್ನು ನಮ್ಮ ಸಾಮರ್ಥ್ಯಗಳನ್ನು ನಿರ್ಲಕ್ಷಿಸುತ್ತಾ ಹೋದಲ್ಲಿ ಅವುಗಳು ನಮ್ಮಿಂದ ದೂರವಾಗಬಹುದು. ಪ್ರತಿ ವ್ಯಕ್ತಿಯಲ್ಲಿಯೂ ಅಪಾರ ಸಾಮರ್ಥ್ಯವಿದೆ, ಪ್ರತಿಭೆಗಳಿವೆ, ಕೌಶಲ್ಯಗಳಿವೆ. ನಮ್ಮಲ್ಲಿ ಹುದುಗಿರುವ ಸಂಪತ್ತನ್ನು ಗುರುತಿಸಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಏಕಲವ್ಯ ತನ್ನಲ್ಲಿದ್ದ ಸಾಮರ್ಥ್ಯವನ್ನು ತಾನೇ ಗುರುತಿಸಿ ಬೆಳೆಸಿದಂತೆ ನಮ್ಮನ್ನು ನಾವು ಗುರುತಿಸಿಕೊಳ್ಳುವುದು ಅಗತ್ಯ ಹಾಗೂ ಅನಿವಾರ್ಯ. ಹೊರಗಣ ಬೆಂಬಲ ಹಾಗೂ ಪ್ರೋತ್ಸಾಹ ದೊರೆತರೆ ಒಳ್ಳೆಯದು, ದೊರೆಯದಿದ್ದರೆ ಅದಕ್ಕಾಗಿ ಕಂಗಾಲಾಗಬೇಕಾಗಿಲ್ಲ ನಮಗೆ ನಾವೇ ಗುರುಗಳು ಎಂದು ಯಶಸ್ವಿಯಾದವರ ಪಟ್ಟಿ ಏನೂ ಕಡಿಮೆಯಿಲ್ಲ.ಸುಂದರನೆಂಬ ಸೈನಿಕನ ಕುದುರೆಯ ಕಥೆ