ಮಹಾಲಿಂಗ ನಾಯ್ಕ ನೆಲಸಂತನಿಗೆ ಪದ್ಮಶ್ರೀ ಗರಿ!

Thumbnail

ಮಹಾಲಿಂಗ ನಾಯ್ಕ

ನೆಲಸಂತನಿಗೆ ಪದ್ಮಶ್ರೀ ಗರಿ!

 ನರೇಂದ್ರ ರೈ ದೇರ್ಲ

ಅಮೈ ಮಹಾಲಿಂಗ ನಾಯ್ಕರಿಗೆ ಈ ದೇಶದ ಅತ್ಯುನ್ನತ ಪದ್ಮಶ್ರೀ ಬಂದಾಗ ಸಹಜವಾಗಿ ಒಂದು ಪ್ರಶ್ನೆ, ತಕರಾರು ಹುಟ್ಟಿದ್ದೂ ಇದೆ. ಅವರು ಸುರಂಗ ತೋಡಿದ್ದು, ನೀರು ಬರಿಸಿದ್ದು, ಅಡಿಕೆ ಬೆಳೆಸಿದ್ದು ಎಲ್ಲವೂ ಅವರಿಗಾಗಿಯೇ. ಅವರ ಕಠಿಣ ಪರಿಶ್ರಮ, ಪ್ರಯೋಗ, ಕೃಷಿಯಿಂದ ಬೇರೆಯವರಿಗೇನು ಲಾಭ? ಅವರೇನು ದಶರಥ ಮಾಂಝಿ ತರ ಬೆಟ್ಟ ಕಡಿದು ಊರಿಗೆ ದಾರಿ ಮಾಡಿದ್ದಾರಾ? ಹಾಜಬ್ಬನ ರೀತಿ ಶಾಲೆ ಕಟ್ಟಿದ್ದಾರಾ? ತಿಮ್ಮಕ್ಕನ ಹಾಗೆ ಸಾಲುಮರ ನೆಟ್ಟಿದ್ದಾರಾ? ಇಂಥ ಪ್ರಶ್ನೆಗಳು ಕೆಲವರಲ್ಲಾದರೂ ಮಿಂಚಿ ಮರೆಯಾದುದು ಸತ್ಯ.

ಆದರೆ ಈ ದೇಶದ ಪರಿಧಿಯಲ್ಲಿ ನಿಂತ, ನೆಲಸಮುದಾಯದ ಯಾರಿಗೇ ಆಗಲಿ ಇಂಥ ಪ್ರತಿಷ್ಠಿತ ಪ್ರಶಸ್ತಿ ಪ್ರಾಪ್ತವಾದಾಗ ಲೋಕ ಎಷ್ಟೊಂದು ಹಿಗ್ಗುತ್ತದೆ, ಸಂಭ್ರಮಿಸುತ್ತದೆ ಎಂಬುದಕ್ಕೆ ಶುಕ್ರಿ, ಹಾಜಬ್ಬ, ಮಹಾಲಿಂಗ ನಾಯ್ಕರಂಥವರಿಗೆ ಪದ್ಮಶ್ರೀ ಬಂದಾಗ ನವಮಾಧ್ಯಮಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಇವ ನಮ್ಮವ, ಇವ ನಮ್ಮವ... ಎಂಬ ಪ್ರೀತಿಯ ಹಂಚಿಕೆಯಲ್ಲಿರುವುದು ಗೌರವವಷ್ಟೇ ಅಲ್ಲ, ಬದ್ಧತೆಯದ್ದೂ ಹೌದು.

ಪಂಪನಿಗೆ, ಕುಮಾರವ್ಯಾಸನಿಗೆ, ಕನಕ, ಅಲ್ಲಮ, ಅಕ್ಕನಿಗೆ ಜ್ಞಾನಪೀಠ ಹೇಗೆ ಗೊತ್ತಿರಲಿಲ್ಲವೋ ಹಾಗೆಯೇ ನೆಲದಸಂತ ಈ ಮಹಾಲಿಂಗ ನಾಯ್ಕರಿಗೂ ಪದ್ಮಶ್ರೀ ಶಬ್ದದ ಪರಿಚಯವೇ ಇಲ್ಲ. ಹೆಚ್ಚೆಂದರೆ ತಾನು ತೋಡುವ ಸುರಂಗ, ಅದರಿಂದ ಹರಿಯುವ ಬೊಗಸೆ ನೀರಿಗೆ ಸ್ಥಳೀಯ ಸೊಸೈಟಿ, ಬ್ಯಾಂಕು ಸಾಲ, ಸಬ್ಸಿಡಿ ನೀಡಬಹುದೇನೋ ಎಂದು ನಿರೀಕ್ಷಿಸಿರಬಹುದಷ್ಟೇ. ಅದರಾಚೆ ನಮ್ಮ ದೇಶದ ರೈತರಿಗೆ ಇಂಥ ಪ್ರಶಸ್ತಿ-ಪುರಸ್ಕಾರಗಳು ಕನಸಿನ ಮಾತೇ ಸರಿ.

ಸುರಂಗ-ಕರಾವಳಿ, ಕಾಸರಗೋಡಿನ ಪರಂಪರಾಗತ ಜಲದಾರಿ. ಜಂಬಿಟ್ಟಿಗೆ-ಮುರಮಣ್ಣಿನಲ್ಲಿ ಆಳೆತ್ತರ ಗವಿ ತೋಡುವುದು, ಅದೃಷ್ಟಕ್ಕೆ ಅದರೊಳಗೆ ನೀರು ಪ್ರಾಪ್ತವಾಗುವುದೂ ಇದೆ. ತೋಡಿದ ಮೊದಲ ಸುರಂಗದಲ್ಲೇ ನೀರು ಉಕ್ಕುವುದು ಕಡಿಮೆ. ಒಳಗಡೆ ತೋಡುತ್ತಾ ಹೋದಂತೆ ಭೂಮಿ ಜರಿಯುವುದು, ಕಲ್ಲುಬಂಡೆ ಅಡ್ಡವಾಗುವುದು, ನೀರೇ ಸಿಗದಿರುವುದು ಇಂಥ ಅಡಚಣೆಯಿಂದ ಮತ್ತೆ ಹೊಸ ಸುರಂಗ ತೋಡುವುದು ಇದ್ದೇ ಇದೆ. ಮಹಾಲಿಂಗಣ್ಣ ಮಾಡಿದ್ದು ಇದನ್ನೇ. ಒಂದು, ಎರಡು, ಮೂರು... ಸತತ ಎಂಟರಷ್ಟು ಸುರಂಗ ತೋಡಿದ್ದಾರೆ! ಈಗ ಅವರ ತುಂಡು ಭೂಮಿಯಲ್ಲಿ ಮೂರು ಸುರಂಗಗಳು ಕಾಣಿಸುತ್ತವೆ. ನೀರಿಲ್ಲದ ಐದನ್ನು ಮುಚ್ಚಿ ಹಾಕಿದ್ದಾರೆ.

ಬಹುಶಃ ಮೊದಲ ಸುರಂಗದಲ್ಲೇ ನೀರು ಬರುತ್ತಿದ್ದರೆ ಈ ಅಮೈ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ. ಅವರನ್ನು ಭಗೀರಥ ಎಂದು ಕರೆಯುವುದೇ ಅದಕ್ಕೆ. ನೀರು ಬರಲೇ ಬೇಕು, ಆ ಕಾಲದಲ್ಲಿ ಬೋರು ಇರಲಿಲ್ಲ. ಮಹಾಲಿಂಗ ಭಟ್ರು ಕೊಟ್ಟ ದರ್ಖಾಸ್ತು ಭೂಮಿ ಹಾಳಾಗಬಾರದು, ನೀರಿಲ್ಲ ಎಂದು ಪಾಳು ಬೀಳಬಾರದು, ಮಹಾಲಿಂಗಣ್ಣ ಹಠ ಬಿಡಲಿಲ್ಲ. ಬೆಳಿಗ್ಗೆ ಬೇರೆ ಮನೆಯಲ್ಲಿ ದುಡಿತ. ಸಂಜೆ-ತಡರಾತ್ರಿವರೆಗೆ ಸುರಂಗ ಕಾಯಕ. ಏಕಾಂಗಿ ಪರಿಶ್ರಮ.

ಮಹಾಲಿಂಗಣ್ಣ ಈಗ ಬಾಳುವ ತುಂಡುಭೂಮಿಗೆ ನಲ್ವತ್ತೆರಡು ವರ್ಷಗಳ ಇತಿಹಾಸವಿದೆ. ಆರಂಭದ ಮೂರು ವರ್ಷ ಆ ಜಾಗದಲ್ಲಿ ಪಟ್ಟಪಸೆ ನೀರಿರಲಿಲ್ಲ. ಬೇರೆ ಕಡೆಯಿಂದ ನೀರು ಹೊತ್ತುಕೊಂಡೇ ಬುಡ ಬುಡಗಳಿಗೆ ಸುರಿದು ಕೆಲವೊಂದು ತೆಂಗಿನ ಮರ ಬೆಳೆಸಿದ್ದೂ ಇದೆ. ಅದು ದೇಹದಲ್ಲಿ ಶಕ್ತಿ ಇದ್ದ ಉತ್ಸಾಹದ ಕಾಲ. ಅದೇ ಹುರುಪಿನಲ್ಲಿ ಅವರು ಒಂದರ ಹಿಂದೆ ಒಂದರಂತೆ ಸುರಂಗ ತೋಡಲು ತೊಡಗಿದ್ದು.

ಬರೀ ಸುರಂಗ ಒಂದೇ ಅಲ್ಲ ಮಹಾಲಿಂಗ ನಾಯ್ಕರ ಹಠ, ಪರಿಶ್ರಮ, ಕೌಶಲ್ಯದ ದುಡಿಮೆಗೆ ಸಾಕ್ಷಿಯಾಗಬಲ್ಲ ಹತ್ತಾರು ಮಾದರಿಗಳು ಅವರ ಹಸಿರು ಆವಾರದೊಳಗೆ ಇದೆ. ಅವರ ಮನೆಗೆ ಪಾಯ-ಗೋಡೆ ಮಾಡಿದ್ದೂ ಅವರೇ. ಅಡಿಕೆ, ತೆಂಗು, ಬಾಳೆ ನೆಟ್ಟದ್ದೂ ಅವರೆ. ಸರಕಾರದಿಂದ ಯಾವ ಸವಲತ್ತೂ ಪಡೆಯಲಿಲ್ಲ. ಬ್ಯಾಂಕು ಸಾಲ ಮಾಡಲಿಲ್ಲ. ಹಾಸಿಗೆ ಇದ್ದಷ್ಟೇ ಕಾಲುಚಾಚುವ ಎಂಬುದು ಅವರ ಇರಾದೆ. ಈಗ ನೀರಿದೆ ಎಂದು ಹೆಚ್ಚು ಹಾಕುವುದಿಲ್ಲ. ಬುಡ ಬುಡಗಳಿಗೆ ಎಷ್ಟು ಬೇಕೋ ಅಷ್ಟೇ ಅಳೆದು ಸುರಿದು ಹಾಕುತ್ತಾರೆ. ತೋಟದೊಳಗೆ ಈಗ ೩೦೦ ಅಡಿಕೆ, ೭೫ ತೆಂಗು, ೨೦೦ ಬಾಳೆ, ಮೆಣಸು ಎಲ್ಲವೂ ಇದೆ.

ಮಹಾಲಿಂಗ ನಾಯ್ಕರು ಗೊನೆಗೌಡರು. ಅಂದರೆ ತೆಂಗು, ಅಡಿಕೆ ತೆಗೆಯುವವರು, ಬೋರ್ಡೋ ಬಿಡುವವರು, ತುಂಬಾ ತುಂಬಾ ಕಠಿಣ ದುಡಿಮೆ. ಅಕ್ಕಪಕ್ಕದವರ ತೋಟಕ್ಕೆ ಹೋಗಿ ಬಹಳ ವರ್ಷ ಅದನ್ನೇ ಮಾಡಿದವರು. ಒಮ್ಮೆ ಆಯತಪ್ಪಿ ತೆಂಗಿನಕಾಯಿ ತೆಗೆಯುವಾಗ ಬಿದ್ದು ಸುಮಾರು ಒಂದು ವರ್ಷ ಚಿಕಿತ್ಸೆ ಪಡೆಯಬೇಕಾಯಿತು. ಮುಂದೆ ನಾಯ್ಕರು ಬೇರೆ ಮನೆಯ ಇಂಥ ಸವಾಲಿನ ಕೆಲಸಕ್ಕೆ ಮುಂದಾಗದೆ ತನ್ನ ಮನೆಯಲ್ಲೇ ಉಳಿದರು. ಮನಸ್ಸು ಕುಗ್ಗದಂತೆ ಅವರೇ ನೆಟ್ಟ ಹಸಿರು ಕಾಪಾಡಿತು.

ಮಹಾಲಿಂಗ ನಾಯ್ಕರು ನೆಟ್ಟ ಪ್ರತಿಗಿಡಗಳೊಂದಿಗೆ ಅವರ ಬೆವರು ಅಂಟಿಕೊಂಡಿದೆ. ಹಿಡುವಳಿ ಚಿಕ್ಕದಿರಬಹುದು, ಅವರು ತೋಡಿದ ಸುರಂಗದಾಚೆ ಆ ಕೃಷಿಯನ್ನು ಊಹಿಸಲಾಗುವುದಿಲ್ಲ. ಈಗ ನೀರಿಗೆ ಬೇರೆ ಮೂಲ ಇರಬಹುದು, ನೀರಿಗಾಗಿ ಟ್ಯಾಂಕ್ ಇರಬಹುದು, ಬುಡ ಬುಡಗಳಿಗೆ ಹಿಡಿಯಲು ಪೈಪ್ ಬಂದಿರಬಹುದು. ಇಡೀ ತೋಟ, ಬದುಕಿನ ಪಾಯದಲ್ಲಿ ಸ್ಥಾಯಿಯಾಗಿ ನಿಂತಿರುವುದು ಸುರಂಗದ ನೀರೇ. ಈ ಕಾರಣಕ್ಕೇ ಸುರಂಗದಲ್ಲಿ ನೀರು ಉಕ್ಕಿದ ದಿನ, ಘಳಿಗೆಯನ್ನು ಪದ್ಮಶ್ರೀಗೆ ತಾಳೆ ಹಾಕುತ್ತಾರೆ. ಅವೆರಡೂ ತನಗೆ ಒಂದೇ ಸುಖ, ಸಂಭ್ರಮ ಎನ್ನುತ್ತಾರೆ.

ರೈತ ತನಗಾದ ಅವಮಾನವನ್ನು ತಡೆಯಲಾರ. ಚಿಕ್ಕ ಚಿಕ್ಕ ರೈತರಿಗೆ ಇಂಥ ಮಾನ-ಅಪಮಾನಗಳ ಪ್ರಜ್ಞೆ ಜಾಸ್ತಿ. ನಾಯ್ಕರಿಗೆ ಬೇರೆ ಕೆಲಸವಿಲ್ಲ. ಗುಡ್ಡದ ಮೇಲೆ ನೀರು ಬರುವುದಾದರೂ ಹೇಗೆ? ಸುರಂಗ ಕೈಲಾಗದ ಕೆಲಸ. ಅದರ ತೂತಿಗೆ ಬೇರೆ ಕಡೆಯಿಂದ ನೀರು ತಂದು ಸುರಿಯಬೇಕಷ್ಟೇ... ಬೇರೆಯವರು ಅಂದು ಮಾಡಿದ್ದ ಅವಮಾನದ ಮಾತು ಇಂದಿಗೂ ಕಿವಿಯೊಳಗೆ ರಿಂಗಣಿಸುತ್ತಿದೆ. ನೀರು ಬಂದದ್ದು ಮೊದಲನೆಯದು, ಈಗ ಪದ್ಮಶ್ರೀ... ನಾಯ್ಕರಿಗಾದ ಎಲ್ಲಾ ಅವಮಾನ ಕೀಳರಿಮೆಯನ್ನು ಗುಡಿಸಿ ಹಾಕಿದೆ. ಲಲಿತಾ ಮಡದಿ, ಮೂರು ಮಂದಿ ಮಕ್ಕಳು. ಸುಖ ಸಂಸಾರ.

ಸಮುದಾಯ ಕ್ಷೇಮದ ಉದ್ದೇಶಕ್ಕೇ ಮಹಾಲಿಂಗ ನಾಯ್ಕರು ದುಡಿದಿರಲಾರರು. ಆದರೆ ತುಂಡು ಭೂಮಿಗೆ ಹಸಿರು ಹಚ್ಚಿದ ಅವರ ವ್ಯಕ್ತಿ ಮಾದರಿ. ಕೈಲಾದವರಿಗೆ, ನಿರುತ್ಸಾಹಿಗಳಿಗೆ ಚೈತನ್ಯವಾಗಬಹುದು. ಮತ್ತೆ ಮತ್ತೆ ಪ್ರಯತ್ನಿಸಿ ಗೆಲ್ಲುವ ಇಂಥ ಹಠವಾದಿಗಳ ಮನೋಸ್ಥೈರ್ಯ ಉಳಿದವರಿಗೂ ಮಾದರಿಯಾಗಲಿ ಎಂಬುದು ತರಂಗದ ಒತ್ತಾಸೆ.

 

ಸುಸ್ಥಿರ ನೀರಿಗೆ ಸುರಂಗ ತಂತ್ರ

ಭೂಮಿಗೆ ಅಡ್ಡಡ್ಡ ಕನ್ನ ಕೊರೆದು ನೀರಿನ ಮೂಲ ಹುಡುಕುವ ಸುರಂಗ ಪದ್ಧತಿಗೆ ಶತಮಾನದಂಚಿನ ಇತಿಹಾಸವಿದೆ. ಅಡ್ಡಬೋರು, ನೀಟಬೋರುಗಳನ್ನು ಕಲ್ಪಿಸಲಾಗದ ಕಾಲದಲ್ಲೇ ಕಾಸರಗೋಡು-ಕರಾವಳಿಯ ಜಿಲ್ಲೆಗಳಲ್ಲಿ ಕೃಷಿಗಾಗಿ ತೋಟದ ಕೆರೆಯಲ್ಲಿ ಒಂದಲ್ಲ, ಐದಾರು ಸುರಂಗ ತೋಡಿದವರೂ ಇದ್ದಾರೆ. ಮನೆ ಕಟ್ಟಲೆಂದು ಬೆಟ್ಟ ಕಡಿದ ನೀಕದಲ್ಲಿ ಸುರಂಗ ತೋಡಿ ಮನೆಯಂಗಳಕ್ಕೆ ನೀರು ಹರಿಸಿದವರೂ ಇದ್ದಾರೆ.

ವಿಲ್ಲಿಯರ‍್ಸ್-ಕಿರ್ಲೋಸ್ಕರ್ ಪಂಪು ನೀರಾವರಿ ಬರುವ ಮುಂಚೆ ಈ ಭೂಭಾಗದಲ್ಲಿ ಅಡಿಕೆತೋಟ ಎದ್ದದ್ದು ಬಹುಪಾಲು ಇದೇ ತಂತ್ರದಿಂದ. ಜಂಬಿಟ್ಟಿಗೆ ಭೂಮಿಯನ್ನು ಅಡ್ಡಡ್ಡ ಬಗೆದು ಬಿಲಕೊರೆಯುವ ದೇಸೀ ಸುರಂಗಕಲೆ ಗಣಿವಿಜ್ಞಾನದ ಒಂದು ಕವಲು. ಭೂಮಿಯೊಳಗೆ ಯಾವತ್ತೂ ಜಲದರಿವು ಸಮಾನಾಂತರವಾಗಿ ಇರುವುದಿಲ್ಲ. ಅದು ಎಲ್ಲೆಲ್ಲೊ ಅಸ್ತವ್ಯಸ್ಥವಾಗಿರುತ್ತದೆ. ಕೊರೆದ ಬಿಲ ಒಂದಲ್ಲ ಒಂದು ಕೋನದಲ್ಲಿ ಆ ಜಲಸೆಳೆಗೆ ಸಂಧಿಸುವುದು ಗ್ಯಾರಂಟಿ. ಆಗ ಒರತೆ ಸುರಂಗದ ಮೂಲಕ ಕೆರೆಗೆ ಹರಿಯುತ್ತದೆ. ಹೀಗೆ ಹರಿಯುವ ನೀರು ಕಡಿಮೆ ಇದ್ದರೂ ದಿನದ ಪೂರ್ತಿಭಾಗ ಹರಿಯುವುದರಿಂದ ಸಂಗ್ರಹಾಗಾರದಲ್ಲಿ ತುಂಬಿ ಕೃಷಿಯೋಪಯೋಗಿಯಾಗುತ್ತದೆ.

ಜಂಬಿಟ್ಟಿಗೆ-ಮರಕಲ್ಲು ಬಿಟ್ಟು ಬೇರೆ ಯಾವುದೇ ಮಣ್ಣಿನಲ್ಲಿ ಸುರಂಗ ಸಾಧ್ಯವಿಲ್ಲ. ಮೆದುಮಣ್ಣಿನಲ್ಲಿ ತೋಡಿದರೆ ಅಡಿಗಡಿಗೆ ಮಣ್ಣು ಜಾರುವುದೇ ಹೆಚ್ಚು. ಮತ್ತೂ ಪ್ರಯತ್ನ ಮುಂದುವರಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಮುಮ್ಮುಖವಾಗಿ ತೋಡುತ್ತಾ ಹೋಗುವಾಗ ಹಿಮ್ಮುಖವಾಗಿ ಜರಿದು ಮಣ್ಣು ಬಾಗಿಲಿಗೆ ಕೂತರೆ ಕೆಲಸಗಾರ ಪ್ರಾಣಾಪಾಯದಿಂದ ಪಾರಾಗುವುದು ಕಷ್ಟ.

ಸುರಂಗ ಕೌಶಲ್ಯ-ಕಾಮಗಾರಿಯನ್ನು ನುರಿತ ಕುಶಲಕರ್ಮಿಗಳಷ್ಟೇ ಮಾಡಬಲ್ಲರು. ಮಳೆಗಾಲ ನಿಂತ ಮೇಲೆ ಸಾಮಾನ್ಯವಾಗಿ ಡಿಸೆಂಬರ್‌ನಿಂದ ಜೂನ್‌ವರೆಗೆ ಭೂಮಿಯನ್ನು ಕಡಿಯಬಹುದು. ಕೆರೆ, ಬಾವಿಗಳಲ್ಲಿ ತೋಡುವುದಾದರೆ ನೀರು ತಳಮಟ್ಟದವರೆಗೆ ಆರಿರಬೇಕು. ಕೆರೆಯ ಪಕ್ಕದ ಧರೆಗೆ ಕನ್ನ ಕೊರೆಯುವುದಾದರೆ ಸುರಂಗಕರ್ಮಿಗಳು ತಮ್ಮದೇ ದೇಸೀ ಜಾಣ್ಮೆಯನ್ನು ಪಣಕ್ಕೊಡ್ಡುತ್ತಾರೆ. ಕಲ್ಲುಬಂಡೆಗಳಿಲ್ಲದ, ಹುತ್ತ ಅಥವಾ ಕೆಲವು ನಿರ್ದಿಷ್ಟ ಜಾತಿಯ ಗಿಡಗಳಿರುವ (ನೆಕ್ಕರೆ, ನೀರುಪಾಜವೋ, ಕಿಸ್ಕಾರ)ಗಳಂಥ ಗಿಡಗಳಿರುವ ಕಡೆ ಜಲಸಾಧ್ಯತೆ ಹೆಚ್ಚೆಂದು ಹೇಳುತ್ತಾರೆ.

ಇಂಥ ಸುರಂಗಗಳು ಒಂದಾಳು ಎತ್ತರ, ವ್ಯಕ್ತಿಯೊಬ್ಬ ಸಲೀಸಾಗಿ ಒಳಗಡೆ ಹೋಗಿಬರುವಷ್ಟು ಅಗಲದಲ್ಲಿರುತ್ತದೆ. ಭೂಮಿಯ ಒಳಗಡೆ ಇದರ ಉದ್ದ ಇಂತಿಷ್ಟೇ ಎಂದಿಲ್ಲ. ನೀರು ಸಿಗುವವರೆಗೆ, ಬಂಡೆ, ಮೃದು ಜೇಡಿಮಣ್ಣು ಸಿಗುವವರೆಗೆ ಮುಂದುವರಿಯುವುದೂ ಇದೆ. ಕಾಸರಗೋಡು-ಪೆರ್ಲ ಕಡೆ ನೂರರಿಂದ ಇನ್ನೂರು ಅಡಿ ಉದ್ದದ ಜಲಸುರಂಗಗಳೂ ಇವೆ.

ಸುರಂಗ ತೋಡುವುದು ಏಕವ್ಯಕ್ತಿ ಕೆಲಸ. ಗುಂಪಿನ ಅವಸರದ ದುಡಿಮೆಯಲ್ಲ. ಒಬ್ಬನೇ ನಾಜೂಕಾಗಿ ಕೊರೆಯಬೇಕು. ಕೆಲವು ಕಡೆ ಕೊರೆಯುವವನ ತಲೆಯ ಮೇಲೆ ಬೆಟ್ಟ ಪರ್ವತ ಕಾಡೇ ಇರಬಹುದು. ನೇರವಾಗಿ ಮೈಮೇಲೆಯೇ ಪಿಟಿಪಿಟಿ ಉದುರುವ ಮಣ್ಣು, ಹನಿಹನಿಯಾಗಿ ತೊಟ್ಟಿಕ್ಕುವ ನೀರು, ಯಥೇಚ್ಛ ಗಾಳಿ ಇಲ್ಲದಿರುವುದು, ಮಸುಕು ಬೆಳಕು, ಶ್ರಮ ಮರೆಯಲು ಜತೆಗಾರರಿಲ್ಲದಿರುವುದು- ಹೀಗೆ ಇದೊಂದು ಅನಿರೀಕ್ಷಿತ ಅಪಾಯದ ಒಂಟಿ ಪ್ರಯತ್ನ.

ಹತ್ತು ವರ್ಷಗಳ ಹಿಂದೆ ವಿಠಲ ಶೆಟ್ಟರ ತೋಟದ ಕೆರೆಯಲ್ಲಿ ಸುರಂಗ ಕೊರೆಯುತ್ತಿದ್ದೆ. ಇನ್ನೂ ಐವತ್ತಡಿ ದಾಟಿಲ್ಲ. ನೀರು ಸಿಕ್ಕಿರಲಿಲ್ಲ. ಹೊರಗೆ ಕನ್ನಡಿ ಇಟ್ಟು ಸೂರ್ಯನ ಬೆಳಕನ್ನು ಬಿಲದೊಳಗೆ ಹಾಯಿಸಿ ಮಣ್ಣು ಜಾರಿಸುತ್ತಿದ್ದೆ. ಒಮ್ಮೆಲೇ ಬೆಳಕಿಗೆ ಏನೋ ಅಡ್ಡ ಬಂದಂತಾಯಿತು. ತಿರುಗಿ ನೋಡಿದೆ. ಅಕ್ಕಿಮುಡಿ ಗಾತ್ರದ ಬಂಡೆಯೊಂದು ನನ್ನ ಬೆನ್ನ ಹಿಂದೆಯೇ ಬಾಗಿಲಿಗೆ ಅಡ್ಡವಾಗಿ ಜಾರಿ ಕೂತಿತು. ಕೂಡಲೇ ಪಿಕ್ಕಾಸು, ಹಾರೆ, ಬಟ್ಟಿ ಅಲ್ಲೇ ಬಿಟ್ಟು ಹೊರಗೆ ಓಡಿದೆ. ಕನ್ನಡಿಯೇ ಬೆಳಕೇ ನನ್ನನ್ನು ಎಚ್ಚರಿಸಿದ್ದು ಎನ್ನುತ್ತಾರೆ ಮಾಡಾವಿನ ಮೂಸೆಕುಂಞಿ.

ಭೂಮಿಯ ಒಳಗಡೆ ಕಲ್ಲುಬಂಡೆ ಅಡ್ಡ ಬಂದು ಸುರಂಗ ಅಲ್ಲಿಂದ ಮುಂದೆ ಓರೆಕೋರೆಯಾಗಿ ಸಾಗಿದರೆ ಕನ್ನಡಿಯ ಬೆಳಕು ಉಪಯೋಗಕ್ಕೆ ಬರುವುದಿಲ್ಲ. ಆಗ ತೆಂಗಿನ, ಹರಳೆಣ್ಣೆ ದೀಪಗಳನ್ನು ಸುರಂಗದೊಳಗೆ ಅಲ್ಲಲ್ಲಿ ಉರಿಸಿ ಇಡಬೇಕು. ಇಂಥ ದೀಪಗಳಿಂದ ಇಬ್ಬಗೆಯ ಪ್ರಯೋಜನ. ಒಂದು ಬೆಳಕು, ಎರಡನೆಯದು ಆಮ್ಲಜನಕ ಲಭ್ಯತೆಯ ಸೂಚಕವೂ ಹೌದು. ಇದಕ್ಕಾಗಿ ಸೀಮೆಯೆಣ್ಣೆಯನ್ನು ಬಳಸುವಂತಿಲ್ಲ. ಇದರಿಂದಾಗಿ ಒಳಗಡೆ ಹೊಗೆ ತುಂಬಿ ಉಸಿರುಕಟ್ಟುವ ಸಾಧ್ಯತೆಯೂ ಇದೆ.

ಬೇರೆ ಕೆಲಸಗಳಿಗೆ ಬಳಸುವ ಹಾರೆ, ಪಿಕ್ಕಾಸು, ಬುಟ್ಟಿಗಳನ್ನು ಇಲ್ಲಿ ಉಪಯೋಗಿಸುವಂತಿಲ್ಲ. ಎಲ್ಲವೂ ಪುಟ್ಟಪುಟ್ಟ ಮಿನಿಯೇಚರ್ ಪರಿಕರಗಳು. ಗುಹೆಯೊಳಗೆ ಅಗೆದು ತೆಗೆದ ಮಣ್ಣನ್ನು ಹೊರಗೆ ಸಾಗಿಸಲು ಚಿಕ್ಕ ಮಕ್ಕಳನ್ನು, ಕುಳ್ಳ ವ್ಯಕ್ತಿಗಳನ್ನು ಬಳಸುತ್ತಾರೆ. ತಪ್ಪಿದರೆ ಅಡಿಕೆ ಹಾಳೆಯಲ್ಲಿ ತುಂಬಿಸಿ ಹೊರಗಡೆ ಎಳೆಯಲಾಗುತ್ತದೆ. ಗುಹೆ ಉದ್ದವಾದಂತೆ ಮತ್ತೂ ನೀರು ಸಿಗದಿದ್ದರೆ ಮೇಲಿಂದ ಕಿರುಬಾವಿಯನ್ನು ತೋಡಿ ಸುರಂಗಕ್ಕೆ ಸಂಧಿಸುವಂತೆ ಮಾಡಿ ಗಾಳಿ-ಬೆಳಕಿಗೆ ವ್ಯವಸ್ಥೆ ಮಾಡುವುದಿದೆ. ಇದರಿಂದ ಇನ್ನೊಂದು ಲಾಭವೂ ಇದೆ. ಇಂಥ ಬಾವಿಯ ಮೇಲಿಂದ ರಾಟೆ ಬಳಸಿ ಗುಹೆಯೊಳಗಡೆಯಿಂದ ಮಣ್ಣನ್ನು ಮೇಲಕ್ಕೆತ್ತಿ ಹೊರಗಡೆ ಹಾಕಲಾಗುವುದು.

ಸುರಂಗಗಳ ಹಂಚಿಕೆ ಕರಾವಳಿ ಜೋಡಿ ಜಿಲ್ಲೆಗಳಿಗಿಂತ ಕಾಸರಗೋಡು ಭಾಗದಲ್ಲಿ ಹೆಚ್ಚಿವೆ. ಅಲ್ಲಿಯ ಕರ‍್ಹಾಡ ಬ್ರಾಹ್ಮಣ ಕೃಷಿಕರಿಗೂ ಸುರಂಗಕ್ಕೂ ಇರುವ ನಂಟನ್ನು ಗಮನಿಸಿದರೆ ಈ ತಂತ್ರಜ್ಞಾನ ಮಹಾರಾಷ್ಟ್ರದಿಂದ ಬಂದಿರಬಹುದೆಂದು ಊಹಿಸಬಹುದು. ಎರಡು ದಶಕಗಳ ಹಿಂದೆಯೇ ಕಾಸರಗೋಡಿನ ಸುರಂಗಗಳು ಎಂದು ಕೇರಳದ ಕಲ್ಲಿಕೋಟೆಯ ಸೆಂಟರ್ ಫಾರ್ ವಾಟರ್ ಮ್ಯಾನೇಜ್‌ಮೆಂಟಿನವರು ಅಧ್ಯಯನ ನಡೆಸಿದ್ದಾರೆ. ಈ ಸಂಶೋಧನೆ ಸುರಂಗದ ಮೂಲವನ್ನು ಕ್ರಿ. ಪೂ. ೭೦೦ನೇ ವರ್ಷದಲ್ಲಿ ಇರಾಕ್-ಇರಾನ್‌ಗಳಲ್ಲಿ ಚಾಲ್ತಿಯಲ್ಲಿದ್ದ ಕನಾಟ್ ಎಂಬ ಗುಹೆಗಳಿಗೆ ಹೋಲಿಸುತ್ತದೆ!

 

- ನರೇಂದ್ರ ರೈ ದೇರ್ಲ

ಕನಸು

ಮಾಡಾವು ಅಂಚೆ - ೫೭೪ ೨೧೦

ಪುತ್ತೂರು, ದ. ಕ.

9164561789