ಯುವ ಸಬಲೀಕರಣ

Thumbnail

 

ಯುವ ಸಬಲೀಕರಣ

 

ಅಮೃತೇಶ್ವರ ಅರಳಿಕಟ್ಟಿ

 

 

ಯುವ ಸಬಲೀಕರಣ ಎಂಬ ವಿಷಯ ಯಾವಾಗಲೂ ಪ್ರಸ್ತುತವಾದದ್ದು. ಏಕೆಂದರೆ ಇಂದಿನ ಯುವಕರೇ ನಾಳಿನ ನಾಯಕರು. ಅವರೇ ದೇಶದ ಆಸ್ತಿ. ಅವರೇ ಭವಿಷ್ಯ ನಿರ್ಣಾಯಕರು. ಅವರೇ ದೇಶವನ್ನು ಅಳುವವರು. ಆ ಹಿನ್ನಲೆಯಲ್ಲಿ ಯುವ ಸಬಲೀಕರಣ ಎಂದಿಗಿಂತಲೂ ಪ್ರಸ್ತುತ ದಿನಮಾನದಲ್ಲಿ ಹೆಚ್ಚಿನ ಮಹತ್ವವುಳ್ಳ ವಿಷಯವಾಗಿದೆ.

 

‘ ಇಂದಿನ ಯುವಕರೇ ನಾಳಿನ ನಾಗರಿಕರು, ನಾಯಕರು’ ಎಂಬ ಮಾತನ್ನು ಚಿಕ್ಕಂದಿನಿಂದಲೇ ನಾವೆಲ್ಲರೂ ಕೇಳುತ್ತಾ, ಭಾಷಣದಲ್ಲಿ ಸೇರಿಸಿ ಹೇಳುತ್ತಾ ಬೆಳೆದು ಬಂದಿದ್ದೇವೆ. ಅಂದರೆ ಯುವಕರೇ ದೇಶದ ಶಕ್ತಿ ಅವರು ಚಿಕ್ಕಂದಿನಲ್ಲೇ ನಾಯಕರಾಗುವ, ಉತ್ತಮ ನಾಗರಿಕರಾಗುವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದರ್ಥವಾಗುತ್ತದೆ. ಇದನ್ನೆ ವಿಶ್ವಸಂಸ್ಥೆಯ ಯುನೆಸ್ಕೊದ ಪರಿಭಾಷೆಯಲ್ಲಿ ಅರ್ಥೈಸಿ ಹೇಳುವುದಾದರೆ, “ದೈಹಿಕವಾಗಿ, ಮಾನಸಿಕವಾಗಿ ಸಧೃಡವಾದ ಯುವಕರು ತಮ್ಮ ಜೀವನವನ್ನು ಎಲ್ಲ ಕ್ಷೇತ್ರಗಳಲ್ಲೂ ಸಶಕ್ತವಾಗಿ ಆನಂದಿಸುವುದಾಗಿದೆ. ಅದರ ಜೊತೆಜೊತೆಗೆ ತಾನು ವಾಸಿಸುತ್ತಿರುವ ಸಮುದಾಯಕ್ಕೆ, ಸಮಾಜಕ್ಕೆ, ರಾಜ್ಯ – ರಾಷ್ಟ್ರಕ್ಕೆ ಗಣನೀಯ ಕೊಡುಗೆ ನೀಡುವುದಾಗಿದೆ ಹಾಗೂ ದೇಶದ ಏಳಿಗೆಗೆ ಶ್ರಮಿಸುವುದಾಗಿದೆ.

 

ಪ್ರಸ್ತುತ 21 ನೇ ಶತಮಾನದಲ್ಲಿ ನಾವು ಜೀವಿಸುತ್ತಿದ್ದು, 20 ನೇ ಶತಕದ 80 – 90 ರ ದಶಕದಲ್ಲಾದ ಆಧುನಿಕತೆ, ಕೈಗಾರಿಕತೆ ,ನಗರೀಕರಣ, ಉದಾರೀಕರಣದ ಫಲವಾಗಿ ಹಾಗೂ ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲಿ ಕ್ರಾಂತಿ ಪರಿಣಾಮವಾಗಿ ಪ್ರಸ್ತುತ ದೇಶದಲ್ಲಿ 5ಜಿ ( 5G) ಚಾಲನೆಯಲ್ಲಿದೆ. ಎಲ್ಲ ಸೌಲಭ್ಯ – ಸವಲತ್ತುಗಳು ಕಣ್ಣಳತೆ – ಕೈಯಳತೆಯಲ್ಲಿ ದೊರಕುತ್ತಿವೆ. ಈ ಎಲ್ಲದರ ಸಕಾರಾತ್ಮಕ ಉಪಯೋಗ ತೆಗೆದುಕೊಂಡು ತಮ್ಮ ಜೀವನ ರೂಪಿಸಿಕೊಳ್ಳುವುದು ಯುವ ಜನಾಂಗದ ಕರ್ತವ್ಯ. ಆದರೆ ಅದರಲ್ಲಿ ಅವರು ವಿಫಲವಾಗುತ್ತಿರುವುದು ವಿಪರ್ಯಾಸವೇ ಸರಿ. ಆ ಕಾರಣವಾಗಿಯೇ ಯುವ ಸಬಲೀಕರಣ ಎಂಬುದು ಮುಖ್ಯ ವಿಷಯವಾಗಿರುವುದು.

ಪ್ರಸ್ತುತ ಭಾರತ ದೇಶದಲ್ಲಿ ಒಟ್ಟು ಜನಸಂಖ್ಯೆಯ 66% ಪ್ರತಿಶತದಷ್ಟು ಯುವ ಜನಾಂಗದವಿದೆ. ದೇಶ ಭವಿಷ್ಯದ ಕನಸು – ಕಲ್ಪನೆ, ಆಸೆ – ಆಕಾಂಕ್ಷೆ , ನಿರೀಕ್ಷೆಗಳ ಯಶಸ್ಸು ಅಥವಾ ಅಪಯಶಸ್ಸು ಅವಲಂಬಿತವಾಗಿರುವುದು ಈ ಪ್ರತಿಶತ ಯುವಕರ ಮೇಲೆಯೇ….

ಸರ್ಕಾರಗಳ ಪಾತ್ರ ನಿರ್ವಹಣೆಯಿಂದ ಈಗಂತೂ ಎಲ್ಲರಿಗೂ ಬಟ್ಟೆ, ಆಹಾರ, ವಸತಿ ಸುಲಭವಾಗಿ ಲಭ್ಯವಾಗುತ್ತಿವೆ. ಹಾಗೆ ಶಿಕ್ಷಣ, ಉದ್ಯೋಗವು ಕೂಡಾ. ತಂತ್ರಜ್ಞಾನ ಹಾಗೂ ಇಲೆಕ್ಟ್ರಾನಿಕ್ಸ್ ನಲ್ಲಿ ಉಂಟಾದ ಶೀಘ್ರ ಅಭಿವೃದ್ಧಿಯಿಂದಾಗಿ ಸಂವಹನ – ಸಂಪರ್ಕ ಮಾಧ್ಯಮಗಳು ಯಥೇಚ್ಛ ಜ್ಞಾನ ಮಾಹಿತಿಯನ್ನು ಕಣ್ಣಳತೆಯಲ್ಲೇ ತಂದು ಚೆಲ್ಲುತ್ತಿವೆ. ಮೊಬೈಲ್ ಎಂಬ ಮಾಯಾಂಗನೆ ಅದಕ್ಕೆ ದೇಹ ಧರಿಸಿದ್ದಾಳೆ.

 

ಒಂದು ಅಂದಾಜಿನಂತೆ, ಇದೆಲ್ಲದರ ಸದುಪಯೋಗ ಪಡೆದುಕೊಂಡು ಇಚ್ಛೆಯ ಶಿಕ್ಷಣ, ಇಚ್ಛೆಯ ಉದ್ಯೋಗ ಪಡೆದುಕೊಳ್ಳುವವರು ಒಟ್ಟು ಪ್ರತಿಶತದಲ್ಲಿ ಕೇವಲ 20 % ರಷ್ಟು ಮಾತ್ರ. ಇವರು ತಮ್ಮ ಜೀವನದ ಸಂಪೂರ್ಣ ಬೆಳವಣಿಗೆಗೆ ಜವಾಬ್ದಾರಿ ತೆಗೆದುಕೊಳ್ಳುವವರು. ಕಾಲದ ಅಗತ್ಯಕ್ಕೆ ಅನುಗುಣವಾಗಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವವರು. ಜೊತೆಗೆ ಮುಖ್ಯವಾಗಿ, 21 ನೇ ಶತಮಾನದ ಕೌಶಲ್ಯಗಳಲ್ಲಿ ಪರಿಣತರು ಮತ್ತು ಮಾನಸಿಕವಾಗಿ ಸಧೃಡರೂ, ಸಮರ್ಥರು. ತಮ್ಮ ಮೂಲಭೂತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಶಕ್ತರು. ಅದರ ಜೊತೆ ಜೊತೆಗೆ ತಾವಿರುವ ಹಳ್ಳಿ, ತಾಲೂಕು, ಜಿಲ್ಲೆ, ರಾಜ್ಯ – ರಾಷ್ಟ್ರಕ್ಕೆ ತಮ್ಮ ಆರ್ಥಿಕತೆಯಿಂದ, ಸೇವಾಭಾವನೆಯಿಂದ ಸಹಾಯಕವಾಗಿ ಜೀವಿಸುವವರು. ಇಂಥವರೇ ದೇಶದ ಉಜ್ವಲವಾದ ಸರ್ವತೋಮುಖ ಬೆಳವಣಿಗೆಗೆ ಬೇಕಾಗಿರುವವರು.

ಆದರೆ ಪ್ರಶ್ನೆ ಇರುವುದು ಬೇಜವಾಬ್ದಾರಿಯಿಂದ ,ಕೌಶಲ್ಯರಹಿತರಾಗಿ ಜೀವಿಸುತ್ತಾರಲ್ಲ ಈ 46 % ಪ್ರತಿಶತ ಯುವಕರು ಅವರ ಬಗ್ಗೆ.

ಈ ಯುವಕರು ವಾಸಿಸುವ ಪರಿಸ್ಥಿತಿ – ಪರಿಸರದ ಕಾರಣವಾಗಿಯೋ ,ಸರಿಯಾದ ಶಿಕ್ಷಣ ದೊರೆಯದ ಕಾರಣವಾಗಿಯೋ ಯೋಗ್ಯ ಉದ್ಯೋಗವಂತೂ ಇವರಿಗೆ ಸಿಗುವುದಿಲ್ಲ. ಉದ್ಯೋಗವಿಲ್ಲ ಎಂದ ಮೇಲೆ ಆಹಾರ, ಬಟ್ಟೆ, ವಸತಿ ಇವುಗಳ ಸ್ಥಿತಿ ಅಯೋಮಯ. ಇವರು ದರಿದ್ರರಾಗಿ ಎಲ್ಲಂದರಲ್ಲಿ ಸಿಕ್ಕ ಸಿಕ್ಕ ಸಣ್ಣ ಪುಟ್ಟ ಕೆಲಸ ಮಾಡುತ್ತ ಬಂದ ಕಡಿಮೆ ಆದಾಯದಲ್ಲಿ ಹೇಗೋ ಜೀವನ ತಳ್ಳುತ್ತಾರೆ. ಎಲ್ಲಿ ಆದಾಯ, ಆಹಾರ, ಬಟ್ಟೆ ಸಮರ್ಪಕವಾಗಿ ದೊರೆಯುವುದಿಲ್ಲವೋ ಅಲ್ಲಿಂದಲೇ ಅನಾಗರಿಕ, ಅಕ್ರಮ, ಕೆಲಸಗಳು ಆರಂಭವಾಗುವುದು ಎಂದು ನಮಗಲ್ಲಾ ಗೊತ್ತೆ ಇದೆ. ಅಂತೆಯೇ, ಇವರು ಕೂಡಾ ಕೊಲೆ, ಸುಲಿಗೆ, ಕಳ್ಳತನ, ದರೋಡೆ, ಮೋಸ, ಧಗಾಕೋರತನ ಇವುಗಳನ್ನು ಎಸಗುವುದು . ಹಾಗೆ ಇವುಗಳ ಸಂಬಂಧಿಕರಾದ ಸಾರಾಯಿ, ಗುಟಕಾ, ಬೀಡಿ, ಸಿಗರೇಟ, ತಂಬಾಕು ಇವುಗಳ ದಾಸರಾಗುವುದು ಇದೆಲ್ಲ ಸಾಮಾನ್ಯ ಅಂಶಗಳಾಗಿವೆ. ಇಂಥವರಿಂದ ದೇಶದ ಕೌಟುಂಬಿಕ, ಸಾಮಾಜಿಕ, ಸಾಮುದಾಯಿಕ, ಆರ್ಥಿಕ, ಸಾಂಸ್ಕೃತಿಕ ಏಳಿಗೆಗೆ ಪೆಟ್ಟು ಬೀಳುವುದು ಅವ್ಯವಸ್ಥೆ ತಲೆದೋರುವುದು , ಅರಾಜಕತೆ ತಾಂಡವವಾಡುವುದು.

ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಏನು ಎಂದು ಯೋಚಿಸುವುದಾದರೆ ಮೊಟ್ಟಮೊದಲು ಯುವ ಸಮುದಾಯದಕ್ಕೆ ತಾವಿರುವ ಪರಿಸ್ಥತಿ ಅರಿವಾಗಬೇಕು. ಜೀವನದ ಮಹತ್ವದ ಅರ್ಥವಾಗಬೇಕು. ಮೂಲಭೂತ ಹಕ್ಕು- ಕರ್ತವ್ಯಗಳ ಕುರಿತಾಗಿ ಪ್ರಜ್ಞೆ ಇರಬೇಕು. ದುರದೃಷ್ಠವಶಾತ ಯುವಕರನ್ನು ತಮ್ಮಷ್ಟಕ್ಕೆ ತಮ್ಮನ್ನು ಉತ್ತಮ ನಾಗರಿಕನಾಗಿ ರೂಪಿಸುವಲ್ಲಿ ವಿಫಲರಾಗುತ್ತಿದ್ದಾರೆ.

ಹಾಗಾಗೆ,ಯುವ ಜನಾಂಗದಲ್ಲಿ ಸಬಲೀಕರಣ ಕುರಿತು ಅರಿವು ,ಜಾಗೃತಿ, ಶಿಕ್ಷಣ ಹಾಗೂ ತರಬೇತಿ ನೀಡಿ ಅವರನ್ನು ರಾಷ್ಟ್ರದ ಸಮರ್ಥ ಪ್ರಜೆಯಾಗಿಸಲು ಅಂತರಾಷ್ಟ್ರೀಯ ಮಟ್ಟದ ವಿಶ್ವಸಂಸ್ಥೆಯಿಂದ ಹಿಡಿದು ರಾಜ್ಯ ಮಟ್ಟದವರೆಗೂ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಯುತ್ತಿವೆ.

ನಮ್ಮದೇ ರಾಜ್ಯ ಆ ನಿಮಿತ್ತವಾಗಿ “ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ” ಎಂಬ ಖಾತೆಯೊಂದನ್ನು ತೆರೆದಿದ್ದು ಅದರ ಮೂಲಕವೂ ಹಲವಾರು ವಿಧಧ ಅರಿವು, ಜಾಗೃತಿ ಹಾಗೂ ಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಜಿಲ್ಲೆ, ತಾಲೂಕು, ಹಳ್ಳಿ ಮಟ್ಟದಲ್ಲೂ ನಿರಂತರವಾಗಿ ನಡೆಸುತ್ತಿದೆ. ಇದರ ಸಂಪೂರ್ಣ ಸದುಪಯೋಗ ಯುವ ಸಮುದಾಯ ಪಡೆದುಕೊಂಡರೆ ಯುವ ಸಬಲೀಕರಣ ಅಸಾಧ್ಯವೇನಲ್ಲ? ಎಂಬ ಇಂಗಿತ ನನ್ನದು.