ಅರಸನ ದಂಡನಾಯಕನಾದ ಮಂಗನ ಕಥೆಯು

Thumbnail

ಇದೊಂದು ತುಂಬಾ ಹಳೆಯ ಕಥೆ. ವಿಂಧ್ಯಾಪರ್ವತದ ತೊಪ್ಪಲಿನಲ್ಲಿ ಮರ್ಕಟಪ್ರಿಯ ಎಂಬ ರಾಜ್ಯವೊಂದಿತ್ತು. ಆ ರಾಜ್ಯದ ಸಾಹಸಿ ದೊರೆ ವಾನರಪ್ರಿಯ. ಆತನು ಹಲವಾರು ಯುದ್ಧಗಳ ವೀರ. ಹೀಗಿರಲು ಒಮ್ಮೆ ಆತನು ಕಪಿನಾಡಿನ ಮೇಲೆ ಯುದ್ಧ ಸಾರಿದನು. ಆ ಯುದ್ಧದ ಸಂದರ್ಭದಲ್ಲಿ ಆತನ ದಂಡನಾಯಕರಿಗೆ ಗಜಭಾರ ಎಂಬ ಅತಿ ಸುಂದರವೂ ಬಲಶಾಲಿಯೂ ಆದ ಮಂಗವೊಂದು ದೊರೆಯಿತು.

ಅರಸನ ದಂಡನಾಯಕರು ಆ ಕಪಿಯ ಸೊಬಗು, ಸಾಹಸ ಹಾಗೂ ಚುರುಕುತನದಿಂದ ಆಕರ್ಷಿತರಾಗಿ ಅದನ್ನು ಹಿಡಿದೊಯ್ದು ತಮ್ಮ ರಾಜನಿಗೆ ಒಪ್ಪಿಸಿದರು. ರಾಜ ವಾನರಪ್ರಿಯನಂತೂ ಆ ಕೋತಿಯ ತುಂಟಾಟ, ಮುದ್ದಾಟಗಳಿಗೆ ತೀರಾ ಆಕರ್ಷಿತನಾದನು. ಕ್ರಮೇಣ ಆ ಮಂಗನಿಗೂ ರಾಜನಿಗೂ ಅಗಾಧ ಮೈತ್ರಿ ಹಾಗೂ ಪ್ರೀತಿ ಬೆಳೆಯಿತು. ಅವರಿಬ್ಬರೂ ‘ಎರಡು ಜೀವ ಒಂದೇ ಆತ್ಮ’ ಎನ್ನುವ ರೀತಿಯ ಅನುಬಂಧ ಅವರಲ್ಲಿ ಬೆಳೆಯಿತು.

ಅರಸನಿಗೆ ಗಜಭಾರ ಮಂಗನ ಮೇಲೆ ಅತೀವ ವಿಶ್ವಾಸ ಬೆಳೆದ ಹಾಗೆ ಆ ಮಂಗಕ್ಕೆ ಸೂಕ್ತ ಸ್ಥಾನಮಾನ ನೀಡಬೇಕೆಂಬ ಹಂಬಲ ಆತನಲ್ಲಿ ಬೆಳೆಯಿತು. ಅಂತಿಮವಾಗಿ ಮಂಗನನ್ನು ತನ್ನ ಅಂಗರಕ್ಷಕ ಪಡೆಯ ಮುಖ್ಯಸ್ಥನನ್ನಾಗಿ ನೇಮಿಸಬೇಕೆಂದು ಆತನು ನಿರ್ಧಾರ ಮಾಡಿದನು. ಮಂತ್ರಿಗಳು ಈ ನಿರ್ಧಾರವನ್ನು ಮರುಪರಿಶೀಲಿಸಲು ಕೇಳಿಕೊಂಡರು ಆದರೆ ಅರಸ ತನ್ನ ಪ್ರೀತಿಯ ಮಂಗನ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದ ಕಾರಣ ಮಂತ್ರಿಗಳ ಾಕ್ಷೇಪಕ್ಕೆ ಅವನು ಕಿವಿಗೊಡಲಿಲ್ಲ. ಅಂತಿಮವಾಗಿ  ಒಂದು ಶುಭದಿನ ಮಂಗನ ಕೈಯಲ್ಲಿ ಖಡ್ಗ ನೀಡಲಾಯ್ತು.

ತಾನು ಮಹಾರಾಜನ ಅಂಗರಕ್ಷಕ ಪಡೆಯ ಮುಖ್ಯಸ್ಥನಾದದ್ದು ಮಂಗನಿಗೆ ಅಪಾರ ಸಂತೋಷ ನೀಡಿತು ಯಾಕೆಂದರೆ ಆ ಮಂಗವೂ ಕೂಡಾ ಅರಸನ ಪ್ರಾಮಾಣಿಕ ಪ್ರೀತಿ ಮಾಡುತ್ತಿತ್ತು ತನ್ನ ಮಿತ್ರನ ಸೇವೆ ಮಾಡಲು ತನಗೊಂದು ಸುಯೋಗ ದೊರೆತಿದೆ ಅಂದುಕೊಂಡು ಅದು ಯಾವತ್ತೂ ಅರಸನೊಡನಿದ್ದು ಕಾಳಜಿಯಿಂದ ಆತನ ಸೇವೆ ಹಾಗೂ ಸಂರಕ್ಷಣೆ ಮಾಡುತ್ತಿತ್ತು. ಅರಸನ ಮಂತ್ರಿಗಳು, ರಾಣಿಯರು, ರಾಜಕುಮಾರರೂ, ವಿದೇಶಿ ರಾಜರುಗಳೂ ಕೂಡಾ ಈಗ ಮಂಗನ ಅನುಮತಿ ಇಲ್ಲದೆ ಅರಸನ ಬಳಿ ಹೋಗುವಂತಿರಲ್ಲಿಲ್ಲ.  

ಒಂದು ದಿನ ಅರಸ ಉಪ್ಪರಿಗೆಯ ಮೇಲೆ ಮಲಗಿ  ವಿಶ್ರಾಂತಿ ಪಡೆಯುತ್ತಿದ್ದಾನೆ ಪಕ್ಕದಲ್ಲಿ ಅಂಗರಕ್ಷಕರ ಮುಖ್ಯಸ್ಥ ಮಂಗನೂ ಖಡ್ಗ ಬಿರಿದು ಕಣ್ಣುಬಿಟ್ಟು ಅರಸನ ಕಾಳಜಿ ಹಾಗೂ ಕಾಯ್ಪು ಮಾಡುತ್ತಿದ್ದಾನೆ. ಎಲ್ಲಿಂದ ಬಂತ್ತೋ ಒಂದು ಕವಡೆಕಾಸೂ ಬೆಲೆ ಇಲ್ಲದ ಸೊಳ್ಳೆ. ತನ್ನ ಒಲುಮೆಯ ಅರಸನ ನಿದ್ರೆಗೆ ಭಂಗತರುತ್ತಿದ್ದ ಸೊಳ್ಳೆಯ ಮೇಲೆ ಮಂಗನಿಗೆ ವಿಪರೀತ ಕೋಪ ಉಕ್ಕಿತು.  ಒಮ್ಮೆ ಓಡಿಸಿದರೆ ದೂರ ಓಡಿಹೋದ ಸೊಳ್ಳೆ ಮತ್ತೆ ಪುನಃ ಓಡಿ ಬಂದು ಅರಸನಿಗೆ ತೊಂದರೆ ನೀಡತೊಡಗಿತು. ಮಂಗ ಸೊಳ್ಳೆಯನ್ನು ಓಡಿಸುವುದು, ಅದು ಒಮ್ಮೆಗೆ ಓಡಿಹೋಗಿ ಮತ್ತೆ ಪುನಃ ಬಂದು ಅರಸನಿಗೆ ಕಾಟಕೊಡುವುದು ಹೀಗೆ ನಡೆದೇ ಇತ್ತು. ಇದನ್ನು ಕಂಡುಕಂಡು ಸುಸ್ತಾದ ಮಂಗ ಕೊನೆಗೊಮ್ಮೆ ಕೋಪದಿಂದ ಖಡ್ಗ ಎತ್ತಿ ಸೊಳ್ಳೆಯನ್ನು ಕತ್ತರಿಸಿ ಹಾಕಲು ನಿರ್ಧರಿಸಿತು.

ಸೊಳ್ಳೆಯಾದರೋ ಮಗ ಬೀಸಿದ ಖಡ್ಗದ ಪೆಟ್ಟಿನಿಂದ ಸಲೀಸಾಗಿ ತಪ್ಪಿಸಿಕೊಂಡಿತು ಆದರೆ ಮಂಗ ಬೀಸಿದ ಖಡ್ಗದ ಹೊಡೆತ  ಸರಿಯಾಗಿ ರಾಜನ ಮೂಗಿನ ಮೇಲೆ ಬಲವಾಗಿ ಬಿತ್ತು. ಅರಸನ ಮೂಗು ಚೂರುಚೂರಾಯ್ತು.

ಈಗ ಅರಸನಿಗೆ ಜ್ಞಾನೋದಯವಾಯ್ತು. ತನ್ನ ಮಂತ್ರಿಗಳು ಹೇಳಿದ ಬುದ್ದಿಮಾತಿನ ಬೆಲೆ ಈಗ ಅವನ ಅರಿವಿಗೆ ಬಂತು. ಎಷ್ಟೇ ಪ್ರೀತಿ ಇದ್ದರೂ ತಾನು ಒಂದು ಮಂಗದ ಕೈಯಲ್ಲಿ ಖಡ್ಗ ನೀಡಿ ಮಾಡಿಕೊಂಡ ಕಿತಾಪತಿ ಅರಿವಾಯ್ತು. ಅದೇನೇ ಆದರೂ ಅರಸನು ಮಾತ್ರ ಮೂಗಿಲ್ಲದವನಾಗಿ ಉಳಿದನು.

ಕೆಲವೊಮ್ಮೆ ನಮ್ಮ ನಿತ್ಯ ಬದುಕಿನಲ್ಲಿಯೂ ಹೀಗೆ ಆಗಬಹುದಾಗಿದೆ. ಯಾರನ್ನು ಎಷ್ಟು ನಂಬಬಹುದೋ ಅದಕ್ಕಿಂತ ಅಧಿಕ ನಂಬಿಕೆ ಬೆಳೆಸಿಕೊಂಡರೆ, ಯಾರಿಗೂ ಎಷ್ಟು ಅವಕಾಶ ನೀಡಬೇಕೊ ಅದಕ್ಕಿಂತಲೂ ಅಧಿಕ ಅವಕಾಶ ನೀಡಿದರೆ ಕೊನೆಗೆ ನಮಗೂ ಮೂಗಿಲ್ಲದಾಗುವುದು. ಜೀವನದಲ್ಲಿ ನಾವು ಹಲವಾರು ಮಂದಿಯನ್ನು ಬೇಟಿಯಾಗುತ್ತೇವೆ. ಎಲ್ಲರ ಮೇಲೂ ನಮಗೆ ನಂಬಿಕೆ ಇರುತ್ತದೆ ನಿಜ ಾದರೆ ನಂಬಬೇಕಾದ ಮಟ್ಟ ಹೆಚ್ಚು ಕಡಿಮೆ ಖಂಡಿತ ಇದೆ. ಯಾರ ಮೇಲೆ ಎಷ್ಟು ವಿಶ್ವಾಸವಿಡಬೇಕು ಎನ್ನುವುದನ್ನು ಸ್ಪಷ್ಟವಾಗಿ ತಿಳಿದುಕೊಂಡು ಮುಂದುವರಿಯುವುದು ಉತ್ತಮ ಮಾತ್ರವಲ್ಲ ಅಗತ್ಯ ಕೂಡಾ.